ಹೊಸದಿಗಂತ ವರದಿ,ಮಂಗಳೂರು:
ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ನಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಎಸ್‌ಐಆರ್ ವಿರುದ್ಧ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ, ಐಟಿ, ಇಡಿಯನ್ನು ದುರ್ಬಳಕೆ ಮಾಡಲಾಗುತ್ತಿದೆ. ಇದು ಅತ್ಯಂತ ಗಂಭೀರ ವಿಷಯ ಎಂದರು.
ಎಐ ಆಧರಿತ ಸಾಫ್ಟ್‌ವೇರ್ ಬಳಕೆ
ಪಶ್ಚಿಮ ಬಂಗಾಳದಲ್ಲಿ ಯಾವುದೋ ಎಐ ಆಧರಿತ ಸಾಫ್ಟ್‌ವೇರ್ ಉಪಯೋಗಿಸಿಕೊಂಡು ಕೆಲವೊಂದು ಮತಗಳನ್ನು ತೆಗೆಯುವ ಕೆಲಸ ಆಗಿದೆ. ಬಿಹಾರದಲ್ಲಿ ಸಾಫ್ಟ್‌ವೇರ್ ಇರಲಿಲ್ಲ. ಅದನ್ನು ಪಶ್ಚಿಮ ಬಂಗಾಳದಲ್ಲಿ ಬಳಸಿದರು. ಕರ್ನಾಟಕದಲ್ಲಿ, ಪಂಜಾಬ್‌ನಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ. ಮುಖ್ಯ ಚುನಾವಣಾ ಆಯೋಗಕ್ಕೆ ಪರಮಾಧಿಕಾರ ನೀಡಲಾಗಿದೆ. ಕೋರ್ಟ್‌ಗಳು ಕೂಡಾ ಚುನಾವಣಾ ಆಯೋಗವನ್ನು ಪ್ರಶ್ನಿಸುವಂತಿಲ್ಲ. ಅಂತಹ ಕಾನೂನು ತರಲಾಗಿದೆ ಎಂದರು.
ಬಿಜೆಪಿಯವರಿಗೆ ಚುನಾವಣೆ ಗೆಲ್ಲುವುದೇ ಮುಖ್ಯವಾಗಿದೆ ಹೊರತು, ದೇಶದ ಆರ್ಥಿಕ ಪರಿಸ್ಥಿತಿ, ವಿದೇಶಾಂಗ ನೀತಿ ಹಾಳಾಗಿ ಹೋದರೂ ಚಿಂತೆಯಿಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಗೆಲ್ಲಲು ಇಡಿ, ಐಟಿ ಬಳಕೆ
ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ಚುನಾವಣಾ ಆಯೋಗ ಸಂಶಯಾಸ್ಪದ ರೀತಿಯಲ್ಲಿ ನಡೆದುಕೊಂಡಿದೆ. ವಿರೋಧ ಪಕ್ಷಗಳಿಗೆ ಅವರ ಮೇಲೆ ವಿಶ್ವಾಸ, ನಂಬಿಕೆ ಇಲ್ಲ. ಇದೊಂದು ಕೆಟ್ಟ ಪರಿಸ್ಥಿತಿ. ದೇಶದಲ್ಲಿ ಚುನಾವಣಾ ಆಯೋಗದ ಬಗ್ಗೆ ಯಾರು ಸಹ ಸಂಶಯ ಪಡುತ್ತಾ ಇರಲಿಲ್ಲ. ನಿಷಕ್ಷಪಾತ, ಸ್ವತಂತ್ರವಾಗಿ ನಿರ್ವಹಣೆ ಮಾಡುತ್ತಿದ್ದರು. ಇವತ್ತು ಆ ಪರಿಸ್ಥಿತಿ ಇಲ್ಲ, ಚುನಾವಣೆ ಗೆಲ್ಲಲು ಏನು ಮಾಡಬೇಕು ಅದನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದರು.



