Monday, October 2, 2023

Latest Posts

ಬಿಜೆಪಿ ಕಾರ್ಯಕರ್ತರ ರಕ್ಷಣೆಗಾಗಿ ಶುರುವಾಗಿದೆ ಕಾನೂನು ಸಹಾಯವಾಣಿ- ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಸರಕಾರದ ದ್ವೇಷದ ರಾಜಕಾರಣ ಮುಂದುವರೆದಿದ್ದು, ಅದನ್ನು ದಿಟ್ಟತನದಿಂದ ಎದುರಿಸಲು ಬಿಜೆಪಿ ಕಾರ್ಯಕರ್ತರನ್ನು ರಕ್ಷಿಸುವ ಸಲುವಾಗಿ ಕಾನೂನು ಸಹಾಯವಾಣಿ ತೆರೆಯಲಾಗಿದೆ. ʻನಮ್ಮ ಕಾರ್ಯಕರ್ತರಿಗೆ ನೆರವಾಗುವ ದೃಷ್ಟಿಯಿಂದ ‘ಕಾನೂನು ಸಹಾಯವಾಣಿ’ (18003091907) ಉದ್ಘಾಟಿಸಲಾಗಿದೆʼ ಎಂದು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಹೆಲ್ಪ್‍ಲೈನ್ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರ ಮೇಲೆ, ನಮ್ಮ ಪರವಾಗಿ ಕೆಲಸ ಮಾಡುವವರ ಮೇಲೆ ರಾಜಕೀಯ ದ್ವೇಷದ ರಾಜಕೀಯ ಮಾಡುವ ಮುನ್ಸೂಚನೆಗಳು ಸಿಕ್ಕಿವೆ ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ.

ಯೋಗೇಂದ್ರ ಮತ್ತು ಅವರ 100 ವಕೀಲರ ತಂಡವು ಸಹಾಯವಾಣಿ ಉದ್ಘಾಟಿಸುತ್ತಿದೆ ಎಂದು ತಿಳಿಸಿದರು. ಸದನದ ಒಳಗೆ ಮತ್ತು ಹೊರಗೆ ಇಂಥ ದೌರ್ನಜ್ಯದ ವಿರುದ್ಧ ಹೋರಾಟ ಸಂಘಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಹೋರಾಟದ ಮೂಲಕವೇ ಬಿಜೆಪಿ ಬೆಳೆದುಬಂದಿದೆ. ಈ ಪಕ್ಷದ ದಮನ ಇವತ್ತಿನದಲ್ಲ. ಇಂಥ ದ್ವೇಷವನ್ನು ಎದುರಿಸಿಯೇ ನಮ್ಮ ಪಕ್ಷ ಮುಂದುವರಿದಿದೆ. ನಮ್ಮ ಕಾರ್ಯಕರ್ತರು ವಿಶ್ವಾಸ- ಧೈರ್ಯ ಕಳೆದುಕೊಳ್ಳಬಾರದು. ಪಕ್ಷವು ಅನ್ಯಾಯ, ಅವ್ಯವಸ್ಥೆ ವಿರುದ್ಧ ಹೋರಾಟ ಮಾಡೋಣ ಎಂದು ಕಿವಿಮಾತು ಮತ್ತು ಧೈರ್ಯ ಹೇಳಿದರು. ದೌರ್ಜನ್ಯ ನಡೆದರೆ, ಸುಳ್ಳು ಕೇಸು ಹಾಕಿದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದ ಬಳಿಕ ಯೋಗೇಂದ್ರ ಅವರ ತಂಡವನ್ನು ಅಭಿನಂದಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಹೈಕೋರ್ಟ್ ಪೀಠವಿರುವ ಎಲ್ಲ ಜಾಗಗಳಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮತ್ತು ವಕೀಲರ ತಂಡದ ರಚನೆ ಆಗಿದೆ. ರಾಜ್ಯದ ನೂರಕ್ಕೂ ಹೆಚ್ಚು ವಕೀಲರು ಈ ಸಹಾಯವಾಣಿಯ ನಿರ್ವಹಣೆ ಮಾಡಲು ಸಹಕರಿಸುತ್ತಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿಸಿ ರೌಡಿ ಶೀಟರ್ ಆಗಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಕಾಂಗ್ರೆಸ್ ಸರಕಾರದ ಈ ಕ್ರಮವನ್ನು ಗಮನಿಸಿ ಕಾರ್ಯಕರ್ತರ ನೆರವಿಗೆ ಬರುವ ದೃಷ್ಟಿಯಿಂದ ಸಹಾಯವಾಣಿ ರಚನೆ ಆಗಿದೆ ಎಂದರು.

ಕಾನೂನು ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೂಡಾಘಟ್ಟ ಮಾತನಾಡಿ, ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಕಾನೂನಾತ್ಮಕವಾಗಿ ನಮ್ಮ ಕಾರ್ಯಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಮುಂದಾಗಿದೆ. ನಮ್ಮ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಸಹಾಯವಾಣಿ ಉದ್ಘಾಟಿಸಲಾಗುತ್ತಿದೆ. ಸಂಸದ ತೇಜಸ್ವಿ ಸೂರ್ಯ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!