ಶೀಘ್ರವೇ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು: ಗೃಹ ಸಚಿವ ಡಾ ಜಿ ಪರಮೇಶ್ವರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಶೀಘ್ರವೇ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ರೂಪಿಸುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಇಂದು ಶಾಸಕ ಸಿ ಕೆ ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುಕ್ಕಾ ಬಾರ್ ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ವ್ಯಾಪಾರ ಪರವಾನಗಿ ನೀಡುವುದಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ದಿಂದ ಪರವಾನಗಿ ಪಡೆದು ವ್ಯಾಪಾರಿಗಳು ಹುಕ್ಕಾ ಬಾರ್​ಗಳನ್ನು ನಡೆಸುತ್ತಿದ್ದಾರೆ. ನ್ಯಾಯಾಲಯವು ಕೂಡ ಹುಕ್ಕಾ ಸೇದುವವರಿಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕು ಎಂದು ಹೇಳಿದೆ. ಆದರೆ ನಿಯಂತ್ರಣದ ಬಗ್ಗೆ ಏನೂ ಹೇಳಿಲ್ಲ. ಆದರೂ ಯುವ ಜನಾಂಗದ ಸ್ವಾಸ್ತ್ಯದ ದೃಷ್ಠಿಯಿಂದ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ಸುರೇಶ್ ಕುಮಾರ್ ಅವರು, ಹುಕ್ಕಾ ಸೇದುವುದು ಸಿಗರೇಟ್ ಸೇದುವುದಕ್ಕಿಂತಲ್ಲೂ 200 ಪಟ್ಟು ಹೆಚ್ಚು ಹಾನಿ ಮಾಡುತ್ತದೆ ಎಂಬ ವಿಚಾರ ಹಲವು ಅಧ್ಯಯನಗಳಿಂದ ಬಯಲಾಗಿದೆ. ಪಂಜಾಬ್, ರಾಜಸ್ಥಾನ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಹುಕ್ಕಾ ಬಾರ್​ಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಆರೋಗ್ಯ ಸಚಿವ ದಿನೇಶ್‍ ಗುಂಡೂರಾವ್ ಅವರು ಸಹ ಹುಕ್ಕಾ ಬಾರ್ ನಿಷೇಧಕ್ಕೆ ಒಲವು ವ್ಯಕ್ತಪಡಿಸಿದ್ದರು. ಸರ್ಕಾರ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!