ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಲೆಜಿಸ್ಲೇಜರ್ ಕಪ್-2024 ಚೆಸ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಟೂರ್ನಿಯಲ್ಲಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಚಾಂಪಿಯನ್ ಆಗಿದ್ದರೆ, ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ ರನರ್ ಅಪ್ ಅಗಿದ್ದಾರೆ. ಇನ್ನು ಪ್ರತಾಪ್ ಸಿಂಹ ನಾಯಕ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚಾಂಪಿಯನ್, ರನರ್ ಅಪ್ ಹಾಗೂ ತೃತೀಯ ಸ್ಥಾನ ಪಡೆದುಕೊಂಡವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು.
ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಅವರು ಈ ಚೊಚ್ಚಲ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಟ್ರೋಫಿ ನೀಡಿದರು. ಅಲ್ಲದೇ ಚಾಂಪಿಯನ್ ಆದ ಅಜಯ್ ಸಿಂಗ್ ಅವರಿಗೆ 2 ಲಕ್ಷ ರೂ. ನಗದು ಬಹುಮಾನ ಸಹ ಸಿಕ್ಕಿದೆ.
ಇನ್ನು ಫೈನಲ್ ಪಂದ್ಯದಲ್ಲಿ ಅಜಯ್ ಸಿಂಗ್ ವಿರುದ್ಧ ಪರಾಭವಗೊಂಡು ರನರ್ ಅಪ್ ಆಗಿರುವ ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ ಅವರು ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟಿದ್ದು, ಅವರಿಗೆ ಸಿಎಂ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಇನ್ನು ಬಿಜೆಪಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಈ ಲೆಜಿಸ್ಲೇಚರ್ ಕಪ್-2024 ಚೆಸ್ ಟೂರ್ನಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ಅವರಿಗೂ ಸಹ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿದರು.