ಹೊಸದಿಗಂತ ವರದಿ,ಮಡಿಕೇರಿ:
ವ್ಯಕ್ತಿಯೊಬ್ಬರ ಜಾತಿ ನಿಂದನೆ ಮಾಡಿದ್ದಲ್ಲದೆ, ಕತ್ತಿಯಿಂದ ಕಡಿದು ಗಾಯಗೊಳಿಸಿದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ ಇಲ್ಲಿನ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ಕುಶಾಲನಗರ ಮಾದಾಪಟ್ಟಣ ನಿವಾಸಿ ನಂದೀಶ ಎಂಬವರೇ ಜೈಲು ಶಿಕ್ಷೆ ಹಾಗೂ ದಂಡ ಶಿಕ್ಷೆಗೆ ಗುರಿಯಾದವರು.
ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಂದೀಶನು 2022ರ ಅಕ್ಟೋಬರ್ 11ರಂದು ಮಾದಾಪಟ್ಟಣ ನಿವಾಸಿ ಅಣ್ಣಾಜಿ ಎಂಬವರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆ ಮತ್ತು ಎಡಭಾಗದ ಕಿವಿಯ ಬಳಿ ಕಡಿದು, ಕಿವಿಯ ಭಾಗ ತುಂಡರಿಸಿದ್ದರೆನ್ನಲಾಗಿದೆ.
ಈ ಸಂಬಂಧ ದೊರೆತ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಕುಶಾಲನಗರ ಟೌನ್ ಪೊಲೀಸರು,ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಪ್ರಕರಣದ ತನಿಖಾಧಿಕಾರಿಯಾದ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ ಗಂಗಾಧರಪ್ಪ ಮತ್ತು ಸಿಬ್ಬಂದಿಯವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಮಡಿಕೇರಿಯ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಾಣಾ ಪತ್ರದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಜಿ.ಪ್ರಶಾಂತಿ ಅವರು, ಅಪರಾಧಿಗೆ ಐಪಿಸಿ ಮತ್ತು ಎಸ್ಸಿ,ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಒಟ್ಟು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 15,000 ರೂ.ಗಳ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ.