ರೈತರ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷ: ಒಬ್ಬೊಬ್ಬರೇ ಓಡಾಡಲು ಹಿಂದೇಟು ಹಾಕುತ್ತಿರುವ ಗ್ರಾಮಸ್ಥರು

ಹೊಸದಿಗಂತ ವರದಿ ಮುಂಡಗೋಡ:

ರೈತರ ಗದ್ದೆಗಳಲ್ಲಿ ಮರಿಗಳ ಜೊತೆಗೆ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಒಬ್ಬೊಬ್ಬರೇ ಗದ್ದೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರದಲ್ಲಿ ನಿರ್ಮಾಣವಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಬಸಾಪುರ ಗ್ರಾಮದ ಸುತ್ತಮುತ್ತಲಿನ ರೈತರ ಗದ್ದೆಗಳಲ್ಲಿ ಚಿರತೆ ತನ್ನ ಮರಿಗಳೊಂದಿಗೆ ಓಡಾಟ ನಡೆಸಿದ್ದು, ಗದ್ದೆಯಲ್ಲಿದ್ದ ನಾಯಿಯನ್ನು ಹೊತ್ತೋಯ್ದು ತಿಂದು ಹಾಕಿದೆ. ಇದನ್ನೆಲ್ಲ ಗಮನಿಸಿದ ರೈತರು ಭಯಬೀತರಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಮುಂಡಗೋಡ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೊಳ್ಳಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ರೈತರ ಗದೆಯಲ್ಲಿ ಚಿರತೆ ಓಡಾಡಿದ ಬಗ್ಗೆ ಮಾಹಿತಿ ಪಡೆದು ಹೆಜ್ಜೆಯ ಗುರುತುಗಳನ್ನು ಪರಿಶೀಲಿಸಿ ಚಿರತೆಯ ಹೆಜ್ಜೆಗಳು ಎಂದು ಖಚಿತಪಡಿಸಿ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ಬಸಾಪುರ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ಮಾಡುತ್ತಿದೆ. ಹೆಜ್ಜೆ ಗುರುತು ಪರಿಶೀಲಿಸಿ ಖಚಿತಪಡಿಸಕೊಂಡಿದ್ದೇವೆ. ಎಸಿಎಫ್ ಅವರು ಅಧಿಕಾರಿಗಳ ತಂಡ ರಚನೆ ಮಾಡಿದ್ದು ತಂಡ ಈಗಾಗಲೇ ಚಿರತೆ ಪತ್ತೆ ಕಾರ್ಯ ಆರಂಭಿಸಿದೆ. ಪ್ರಾಣಿ ಮತ್ತು ಮನುಷ್ಯರ ಮೇಲೆ ದಾಳಿ ಮಾಡಿದರೆ ಅದನ್ನು ಹಿಡಿಯಲು ಬೋನ್‌ಗಳನ್ನು ಇಡಲಾಗುವುದು. ಸಾರ್ವಜನಿಕರು ಈ ಭಾಗದಲ್ಲಿ ಗದ್ದೆಗಳಿಗೆ ಹೋಗದಂತೆ ಹಾಗೂ ಹೆಚ್ಚು ಜಾಗೃತರಾಗಿರುವಂತೆ ಸೂಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ ಕಳ್ಳೊಳ್ಳಿ ತಿಳಿಸಿದ್ದಾರೆ.

ಜಾಗೃತಿ ಮೂಡಿಸಿದ ಅರಣ್ಯ ಇಲಾಖೆ:

ನಂದಿಕಟ್ಟಾ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ರೈತರು ಸಾರ್ವಜನಿಕರು ಒಬ್ಬೊಬ್ಬರೆ ಗದ್ದೆಗಳಿಗೆ ಹೋಗಬಾರದು, ರಾತ್ರಿ ಸಮಯದಲ್ಲಿ ಗದ್ದೆಯಲ್ಲಿ ಒಬ್ಬರೇ ಮಲಗಬಾರದೂ, ನಿಮ್ಮ ನಿಮ್ಮ ಗ್ರಾಮಗಳಲ್ಲಿ ಹೆಚ್ಚು ಜನರಿಗೆ ಜಾಗೃತಿ ವಹಿಸಬೇಕು. ಒಂದು ವೇಳೆ ಯಾರಿಗಾದರು ಚಿರತೆ ಕಂಡ ತಕ್ಷಣವೇ ಇಲಾಖೆಗೆ ಮಾಹಿತಿ ನೀಡುವಂತೆ ಧ್ವನಿವರ್ಧಕದ ಮೂಲಕ ಬುಧವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಯಿತು. ಹಾಗೂ ಗ್ರಾ.ಪಂ ಯವರು ಸಾರ್ವಜನಿಕವಾಗಿ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ.

ಚಿರತೆ ಪ್ರತ್ಯಕ್ಷವಾಗಿದ್ದರಿಂದ ಗ್ರಾಮಸ್ಥರು ಹಾಗೂ ಗದ್ದೆಯಲ್ಲಿ ಕೆಲಸ ಮಾಡುವ ರೈತರಲ್ಲಿ ಭಯದ ವಾತವರಣ ಸೃಷ್ಟಿಯಾಗಿದ್ದು, ಅರಣ್ಯ ಇಲಾಖೆ ಕೂಡಲೆ ಚಿರತೆಯನ್ನು ಸೆರೆ ಹಿಡಿಯುವ ಮೂಲಕ ಸಾರ್ವಜನಿಕರಲ್ಲಿನ ಭಯದ ವಾತಾವರಣ ಹೋಗಲಾಡಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!