ರಾಷ್ಟ್ರ ನಿರ್ಮಾಣಕ್ಕೆ ಸಂಸ್ಕೃತಿ ಆಧಾರವಾಗಲಿ : ಸು. ರಾಮಣ್ಣ

ಹೊಸದಿಗಂತ ವರದಿ, ಧಾರವಾಡ:

ನಾವೆಲ್ಲ ಒಂದು ನಾವೆಲ್ಲ ಬಂಧು ಎಂಬ ಧ್ಯೇಯವನ್ನೇ ರಾಷ್ಟ್ರೀಯತೆ ಸಾರುತ್ತದೆ. ಈ ವಚನಕ್ಕೆ ಸದಾ ಬದ್ಧರಾಗಿರಬೇಕು ಎಂದು ರಾ.ಸ್ವ. ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದರು.

ನಗರದ ಸರಸ್ವತಿ ನಿಕೇತನ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ‌ ಸಂಘದಿಂದ ನಡೆದ ರಕ್ಷಾಬಂಧನ ಉತ್ಸವದಲ್ಲಿ ಅವರು‌ ಮಾತನಾಡಿದರು.

ಭಾರತದ ಹಬ್ಬಗಳ ದೇಶ. ನಮ್ಮ ಹಬ್ಬಗಳಿಗೆ ಹಲವು ವಿದೇಶಗಳಲ್ಲೂ ರಜೆ ಘೋಷಿಸಲಾಗಿದೆ. ಇದು ಭಾರತದ ಹಿರಿಮೆ. ರಕ್ಷಾಬಂಧನ ದೇಶದೆಲ್ಲೆಡೆ ಆಚರಿಸುವುದರಿಂದ ಇದೊಂದು ರಾಷ್ಟ್ರೀಯ ಉತ್ಸವವಾಗಿದೆ. ಭಾರತ ಪ್ರಾಚೀನ ರಾಷ್ಟ್ರ. ಭಾಷೆ, ಸಂಸ್ಕೃತಿ, ನಾಗರಿಕತೆ ಮುಂತಾದ ಕ್ಷೇತ್ರಗಳಲ್ಲಿ ಜಗತ್ತಿಗೆ ಮಾದರಿಯಾಗಿದೆ.‌ ಆದರೆ ಪಾಶ್ಚಾತ್ಯರ ನಕಾರಾತ್ಮಕ ಪರಿಕಲ್ಪನೆ ಹೇರಿಕೆಯಿಂದ ಸ್ವಾಭಿಮಾನ ಶೂನ್ಯರಾದೆವು.

ರಾಷ್ಟ್ರ ನಿರ್ಮಾಣ ರಾಜಕೀಯ ವ್ಯವಸ್ಥೆಯಿಂದ ಆಗುವುದಿಲ್ಲ. ರಾಮಾಯಣದಲ್ಲಿದ್ದ ರಾಷ್ಟ್ರೀಯತೆ ಮಹಾಭಾರತದಲ್ಲಿರಲಿಲ್ಲ. ಹಾಗಾಗಿ ಅಣ್ಣ ತಮ್ಮಂದಿರ ನಡುವೆ ಯುದ್ಧವಾಯಿತು. ಜನನಿ-ಜನ್ಮಭೂಮಿ ಸ್ವರ್ಗಕ್ಕೆ ಸಮ ಎಂದು ಹೇಳಿದ ಶ್ರೀರಾಮ ರಾಷ್ಟ್ರ ಪುರುಷ, ಮರ್ಯಾದಾ ಪುರುಷೋತ್ತಮ ಎಂದೆನಿಸಿಕೊಂಡ.

ಸಂಸ್ಕಾರದಿಂದ ಮನುಷ್ಯತ್ವ, ದೈವತ್ವ ಸಾಧಿಸಬಹುದು. ಹರಿಶ್ಚಂದ್ರನ ಸತ್ಯಶ್ರದ್ಧೆ ನಮಗೆ ಇಂದಿಗೂ ಆದರ್ಶ. ಲೋಕಮಾನ್ಯ ತಿಲಕರು ಆಂದೋಲನ, ಸ್ವರಾಜ್ಯ ಕಲ್ಪನೆ, ಗಣೇಶೋತ್ಸವ, ಶಿವಾಜಿ ಜಯಂತಿ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆ ಪುನರ್ ಸ್ಥಾಪಿಸಿದರು. ದೇಶದ ಇಂಚಿಂಚೂ ಜಾಗದ ರಕ್ಷಣೆಗೆ ಪ್ರಾಣಾರ್ಪಣೆಗೈದ ಅನೇಕರು ನಮಗೆ ಆದರ್ಶಪ್ರಾಯರಾಗಿದ್ದಾರೆ.

ದೇಶದ ಸಂಪತ್ತು ಕೇವಲ ಭೋಗಕ್ಕಾಗಿ ಅಲ್ಲ. ದೇಶ ನಮಗೆ ಸಾಕಷ್ಟು ಕೊಡುವಾಗ ಅದಕ್ಕೆ ನಮ್ಮ ಕೊಡುಗೆ ಕೊಡುವುದು ಅವಶ್ಯ. ಇದು ನಮ್ಮ ರಾಷ್ಟ್ರದ ಪರಿಕಲ್ಪನೆ. ಜಾತಿ, ಹಣ, ಪ್ರಾದೇಶಿಕತೆ, ಹೆಸರು ಹೊರತುಪಡಿಸಿ ಸಂಸ್ಕೃತಿ ಆಧಾರದ ಮೇಲೆ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಹೇಳಿದರು.‌

ಉತ್ಸವದ ಆತಿಥ್ಯವಹಿಸಿದ ಏರಟೆಕ್ ಕಂಪನಿ ಎಮ್.ಡಿ. ವಿಕ್ರಾಂತ ಸೆಹಗಲ್ ಮಾತನಾಡಿ, ಭಾರತ ಜ್ಞಾನಶಾಲಿ ದೇಶ. ವಸುದೈವ ಕುಟುಂಬಕಮ್‌ ಎಂದು ಹೇಳಿದವರು ನಾವು. ಆಧ್ಯಾತ್ಮ ಹಿನ್ನೆಲೆಯುಳ್ಳ ಭಾರತ ಇಂದು ವಿಶ್ವಶಕ್ತಿಯಾಗುತ್ತಿದೆ ಎಂದು ಹೇಳಿದರು.

ನಗರದ ಗಣ್ಯರು, ಸಂಘದ ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!