ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಕ್ಷಮೆಯಾಚಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಉರುಳಿ ಬಿತ್ತು. ಇದಾದ ನಂತರ, ನರೇಂದ್ರ ಮೋದಿ ಅವರು ‘ನಾನು ಶಿವಾಜಿ ಮಹಾರಾಜರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದರು. ಆದರೆ, ನರೇಂದ್ರ ಮೋದಿ ಅವರು ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ. ಅವರು ಶಿವಾಜಿ ಮಹಾರಾಜರ ಬಳಿ ಮಾತ್ರವಲ್ಲದೆ ಮಹಾರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಗೂ ಕ್ಷಮೆ ಕೇಳಬೇಕು ಎಂದು ರಾಹುಲ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಹಲವಾರು ಸಚಿವ ಸ್ಥಾನಗಳನ್ನು ಅಲಂಕರಿಸಿದ್ದ ದಿವಂಗತ ಕಾಂಗ್ರೆಸ್ ನಾಯಕ ಪತಂಗರಾವ್ ಕದಂ ಅವರ ಜೀವಮಾನದ ಪ್ರತಿಮೆಯನ್ನು ಅನಾವರಣಗೊಳಿಸಿದ ಸಾಂಗ್ಲಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,’ ಕದಮ್ ಜಿ (ಕಾಂಗ್ರೆಸ್ ನ ದಿವಂಗತ ಸಚಿವ ಪತಂಗರಾವ್ ಕದಂ) ಅವರ ಪ್ರತಿಮೆ ಇನ್ನೂ 50-70 ವರ್ಷಗಳ ನಂತರವೂ ಇಲ್ಲಿರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಹೇಳಿದರು.
ಕಾಂಗ್ರೆಸ್ ಸಿದ್ಧಾಂತ ಮಹಾರಾಷ್ಟ್ರದ ಡಿಎನ್ ಎಯಲ್ಲಿದೆ. ಹಿಂದೆ ರಾಜಕೀಯ ಇತ್ತು, ಆದರೆ ಇಂದು ಭಾರತದಲ್ಲಿ ಸೈದ್ಧಾಂತಿಕ ಹೋರಾಟ ನಡೆಯುತ್ತಿದೆ. ನಾವು ಸಾಮಾಜಿಕ ಪ್ರಗತಿಯನ್ನು ಬಯಸುತ್ತೇವೆ ಆದರೆ ಅವರು (ಬಿಜೆಪಿ) ಆಯ್ದ ಕೆಲವರು ಮಾತ್ರ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕೆಂದು ಬಯಸುತ್ತಾರೆ ಎಂದು ಹೇಳಿದರು.