ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು. ಈ ಹಿನ್ನೆಲೆ ಸಂಸತ್ ಅಧಿವೇಶನ ಆರಂಭವಾಗುವ ಮೊದಲು ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡುವಂತೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಒತ್ತಾಯಿಸಿದೆ.
ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಮೋದಿ ಅವರು ಮೊದಲು ಮಣಿಪುರದ ಸರ್ವಪಕ್ಷಗಳ ನಿಯೋಗವನ್ನು ಭೇಟಿ ಮಾಡಬೇಕು ಮತ್ತು ನವೆಂಬರ್ 25 ರಿಂದ ಪ್ರಾರಂಭವಾಗುವ ಸಂಸತ್ ಅಧಿವೇಶನಕ್ಕೂ ಮುನ್ನ ರಾಷ್ಟ್ರಮಟ್ಟದಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.
ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೆ ಮೇಘಚಂದ್ರ ಸಿಂಗ್ ಮತ್ತು ಎಐಸಿಸಿ ರಾಜ್ಯ ಉಸ್ತುವಾರಿ ಗಿರೀಶ್ ಚೋಡಂಕರ್ ಅವರೊಂದಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮಿತ್ ಶಾ ಮತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮೇ 3, 2023 ರಿಂದ, ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಮೋದಿ ಅವರು ವಿಶ್ವದ ವಿವಿಧ ದೇಶಗಳಿಗೆ ಭೇಟಿ ನೀಡಿ, ಧರ್ಮೋಪದೇಶವನ್ನು ನೀಡುತ್ತಾರೆ. ಆದರೆ ನಮ್ಮ ದೇಶದ ಮಣಿಪುರಕ್ಕೆ ಭೇಟಿ ನೀಡಲು ಅವರ ಸಮಯ ಸಿಗತ್ತಿಲ್ಲ. ಆದ್ದರಿಂದ, ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಪ್ರಧಾನಿ ಸಮಯ ಮಾಡಿಕೊಂಡು ಮಣಿಪುರಕ್ಕೆ ಭೇಟಿ ನೀಡಬೇಕು. ಮಣಿಪುರದ ರಾಜಕೀಯ ಪಕ್ಷಗಳು, ರಾಜಕಾರಣಿಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ಅಲ್ಲಿನ ಪರಿಹಾರ ಶಿಬಿರದಲ್ಲಿರುವ ಜನರನ್ನು ಭೇಟಿ ಮಾಡಿಬೇಕು ಎಂದು ರಮೇಶ್ ಒತ್ತಾಯಿಸಿದರು.
ಪ್ರಧಾನಿಯವರು ಮಣಿಪುರದ ಸರ್ವಪಕ್ಷ ನಿಯೋಗವನ್ನು ಭೇಟಿ ಮಾಡಬೇಕು ಮತ್ತು ನಂತರ ರಾಷ್ಟ್ರಮಟ್ಟದಲ್ಲಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.
ಮಣಿಪುರದಲ್ಲಿ ಜುಲೈ 31, 2024 ರಿಂದ ಪೂರ್ಣಾವಧಿ ರಾಜ್ಯಪಾಲರಿಲ್ಲ. ಅದಕ್ಕೂ ಮೊದಲು ಎಸ್‌ಟಿ ವ್ಯಕ್ತಿಯೊಬ್ಬರು ರಾಜ್ಯಪಾಲರಾಗಿದ್ದರು. ಆದರೆ 18 ತಿಂಗಳೊಳಗೆ ಅವರನ್ನು ತೆಗೆದುಹಾಕಲಾಯಿತು. ತಕ್ಷಣವೇ ಪೂರ್ಣಾವಧಿಯ ರಾಜ್ಯಪಾಲರನ್ನು ನೇಮಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ರಮೇಶ್ ತಿಳಿಸಿದರು.
ಪ್ರಧಾನಿ ಮೋದಿ ಅವರು ಮಣಿಪುರವನ್ನು ಕೇಂದ್ರ ಗೃಹ ಸಚಿವರಿಗೆ ಹೊರಗುತ್ತಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಗೃಹ ಸಚಿವರು ಮತ್ತು ಮಣಿಪುರ ವಿಫಲ ಸಿಎಂ ನಡುವೆ ವಿಚಿತ್ರವಾದ ‘ಜುಗಲ್ಬಂದಿ’ ಇದೆ. ಗೃಹ ಸಚಿವರು ಸಿಎಂ ವೈಫಲ್ಯಗಳ ಬಗ್ಗೆ ಏಕೆ ಗಮನ ಹರಿಸಿಲ್ಲ ಮತ್ತು ಅವರನ್ನು ರಕ್ಷಿಸಲು ಏಕೆ ಪ್ರಯತ್ನಿಸುತ್ತಿದ್ದಾರೆ? ರಮೇಶ್ ಪ್ರಶ್ನಿಸಿದರು.