ಮೊಸರಲ್ಲಿ ಕಲ್ಲು ಹುಡುಕುವ ಸಣ್ಣತನದ ರಾಜಕೀಯ ಕಾಂಗ್ರೆಸ್ ನಿಲ್ಲಿಸಲಿ: ಸಿ.ಟಿ.ರವಿ

ಹೊಸದಿಗಂತ ವರದಿ, ದಾವಣಗೆರೆ:

ಕಾಂಗ್ರೆಸ್ ಪಕ್ಷವು ತನಗೆ ರಾಮ ಬೇಕೋ ಬಾಬರ್ ಬೇಕೋ ಎಂಬುದನ್ನು ನಿರ್ಧರಿಸಬೇಕು. ಬಾಬರ್ ಪರವಾಗಿರುವವರಿಗೆ ಈ ದೇಶದಲ್ಲಿ ಜಾಗವಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಿಲ್ಲದೆ ರಾಷ್ಟ್ರವಿಲ್ಲ. ರಾಮನಿಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೋಟ್ಯಂತರ ಜನರ ಅಭಿಲಾಷೆಯಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿದ್ದು, ಇಂತಹ ಸಂತಸದ ಕ್ಷಣದಲ್ಲಿ ಕೊಂಕು ಮಾತಾಡುವುದನ್ನು ಜನ ಒಪ್ಪುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಸಣ್ಣತನದ ರಾಜಕೀಯ ನಿಲ್ಲಿಸುವುದು ಕಾಂಗ್ರೆಸ್ಸಿಗೂ ದೇಶಕ್ಕೂ ಒಳ್ಳೆಯದು ಎಂದರು.

ಕಾಂಗ್ರೆಸ್ ಪಕ್ಷವು ಮೊದಲು ಗೊಂದಲದಿಂದ ಹೊರಬರಬೇಕು. ದೇಶದ ಹಿತಕ್ಕೆ ಯಾವುದು ಸೂಕ್ತ ಎಂಬುದು ಆ ಪಕ್ಷಕ್ಕೆ ಸ್ಪಷ್ಟತೆ ಇಲ್ಲ. ದೇಶದ ಅಖಂಡತೆಯನ್ನು ಕಾಪಾಡುವ ಸ್ಪಷ್ಟ ನಿರ್ಧಾರ ಮಾಡಿದ್ದರೆ 1947ರಲ್ಲಿ ಭಾರತದ ವಿಭಜನೆ ಆಗುತ್ತಿರಲಿಲ್ಲ. ಆದರೆ ಓಲೈಕೆ ನೀತಿಯಿಂದಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧವಿಲ್ಲದ ಖಿಲಾಫತ್ ಚಳವಳಿಯನ್ನು ಕಾಂಗ್ರೆಸ್ ಬೆಂಬಲಿಸಿತು. ಇದರಿಂದಾಗಿಯೇ ದೇಶ ವಿಭಜನೆ ಸಂದರ್ಭದಲ್ಲಿ ಲಕ್ಷಾಂತರ ಜನರ ಮಾರಣಹೋಮ ಆಯಿತು. ಕೋಟ್ಯಂತರ ಜನರು ತಾವಿದ್ದ ನೆಲೆ ಕಳೆದುಕೊಂಡು ನಿರಾಶ್ರಿತರಾದರು. ಲೂಟಿ, ಅತ್ಯಾಚಾರ, ದೌರ್ಜನ್ಯ ಅವ್ಯಾಹತವಾಗಿ ನಡೆಯಿತು. ಎದುರಿಸಿ ನಿಲ್ಲುವುದರಿಂದ ಮತಾಂಧತೆ ಕಡಿಮೆಯಾಗುತ್ತದೆಯೇ ಹೊರತು ಓಲೈಕೆ ಮಾಡುವುದರಿಂದ ಅಲ್ಲ ಎಂದು ಅವರು ನುಡಿದರು.

ಸುಮಾರು 500 ವರ್ಷಗಳ ಸಂಘರ್ಷ ಹಾಗೂ ಲಕ್ಷಾಂತರ ಜನರ ಪ್ರಾಣ ಬಲಿದಾನದ ಫಲವಾಗಿ ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆಗುತ್ತಿದೆ. ಈ ಸಂಭ್ರಮದ ಕ್ಷಣವನ್ನು ಇಡೀ ಜಗತ್ತು ಎದುರು ನೋಡುತ್ತಿದೆ. ಇದು ನಮ್ಮ ಅವಧಿಯಲ್ಲೇ ಆಗುತ್ತಿರುವುದು ಸೌಭಾಗ್ಯದ ಸಂಗತಿ. ರಾಮಮಂದಿರ ನಿರ್ಮಾಣವು ಬಿಜೆಪಿಗೆ ರಾಜಕಾರಣದ ವಿಷಯವಲ್ಲ, ಅದು ನಮಗೆ ರಾಷ್ಟ್ರಕಾರಣದ ವಿಚಾರ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು 1989ರಿಂದಲೇ ಬಿಜೆಪಿಯ ಪ್ರಣಾಳಿಕೆಯಲ್ಲಿದೆ. ಯಾವುದನ್ನೂ ಕದ್ದು ಮುಚ್ಚಿ ಮಾಡುತ್ತಿಲ್ಲ. ರಾಮರಾಜ್ಯದ ಆಶಯದೊಂದಿಗೆ ರಾಮಮಂದಿರವು ರಾಷ್ಟ್ರಮಂದಿರವಾಗಿ ನಿರ್ಮಾಣವಾಗಬೇಕೆಂಬುದು ಬಿಜೆಪಿ ನಾಲ್ಕು ದಶಕಗಳ ಸಂಕಲ್ಪವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ದೇಶದೆಲ್ಲೆಡೆ ಶ್ರೀರಾಮ ಓಡಾಡಿದ ಐತಿಹಾಸಿಕ ಸ್ಥಳಗಳಿವೆ. ಆದರೂ ಕಾಂಗ್ರೆಸ್ಸಿಗರು ಶ್ರೀರಾಮ ಕಾಲ್ಪನಿಕ ವ್ಯಕ್ತಿ ಅಂದರು. ಪೂರ್ಣ ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷವು ಸೋಮನಾಥ ಮಂದಿರದ ಜೊತೆ ಅಯೋಧ್ಯೆ, ಕಾಶಿ, ಮಥುರಾ ಮಂದಿರಗಳನ್ನು ಕೂಡ ನಿರ್ಮಿಸಬಹುದಿತ್ತು. ಆದರೆ ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರಾಗಿಸಲು, ಮುಸ್ಲಿಮರಲ್ಲಿ ಭಯ ಹುಟ್ಟಿಸುವ ರಾಜಕೀಯ ಮಾಡಿದ್ದು ಕಾಂಗ್ರೆಸ್. 1992ರಲ್ಲಿ ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮಧ್ಯಪ್ರದೇಶದಲ್ಲಿದ್ದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ವಜಾಗೊಳಿಸಿತು. ಬೆಂಗಳೂರು, ದಾವಣಗೆರೆ, ಚನ್ನಪಟ್ಟಣದಲ್ಲಿ ಗೋಲಿಬಾರ್ ನಡೆಸಿತು. ಶ್ರೀರಾಮನ ಕುರಿತ ಕಾಂಗ್ರೆಸ್ ಭಕ್ತಿಯನ್ನು ಪ್ರಶ್ನೆ ಮಾಡುವುದಿಲ್ಲ. ಇನ್ನಾದರೂ ಕಾಂಗ್ರೆಸ್ಸಿಗರು ನಿಜ ರಾಮನ ಭಕ್ತರಾಗಲಿ. ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಈಗಲಾದರೂ ಅಯೋಧ್ಯೆಗೆ ಹೋಗುವುದಾಗಿ ಹೇಳಿರುವುದು ಶ್ಲಾಘನೀಯ ಎಂದರು.

ಮುಂಬರುವ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವೇಳೆ ಹೊಸ ಚಿಗುರು, ಹಳೇ ಬೇರು ತತ್ವ ಪಾಲನೆಯಾಗುವ ವಿಶ್ವಾಸವಿದೆ. ಹೊಸಬರಿಗೂ, ಹಳಬರಿಗೂ ಆದ್ಯತೆ ಸಿಗುತ್ತದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ. ದೇಶದ ಹಿತದೃಷ್ಟಿಯಿಂದ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕಿದೆ. ಹೀಗಾಗಿ ಎಲ್ಲಾ ಅಭ್ಯರ್ಥಿಗಳೂ ನಮ್ಮವರೇ. ಯಾರೇ ಅಭ್ಯರ್ಥಿಯಾದರೂ ನಾವೇ ಅಭ್ಯರ್ಥಿಯಾದಂತೆ ಪಕ್ಷದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!