ಕಾವೇರಿ ನೀರು ಬಿಡಲ್ಲ ಎಂದು ಸರ್ಕಾರ ಗಟ್ಟಿ ನಿರ್ಧಾರ ಮಾಡಲಿ: ಮುಖ್ಯಮಂತ್ರಿ ಚಂದ್ರು ಒತ್ತಾಯ

ಹೊಸದಿಗಂತ ವರದಿ ಬಳ್ಳಾರಿ:‌ 

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ದಮ್ಮು ತಾಕತ್ತು ಇದ್ದರೇ ಯಾವುದೇ ಕಾರಣಕ್ಕೂ ನೀರು ಬಿಡೋಲ್ಲ ಎಂದು ಕಾಂಗ್ರೆಸ್ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ಕುರ್ಚಿ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.  ಸರ್ಕಾರಕ್ಕೆ ನಿಜವಾಗಲೂ ರೈತರ, ನಾಡಿನ ಜನರ ಬಗ್ಗೆ ಕಾಳಜಿ ಇದ್ದರೆ ಯಾವುದೇ ಕಾರಣಕ್ಕೂ ನೀರು ಬಿಡಲ್ಲ ಎಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ ಎಂದರು.

ಆಮ್ ಆದ್ಮಿ ಯಾವತ್ತೂ ನಾಡಿನ ಜಲ, ನೆಲ, ಸಂಸ್ಕೃತಿ, ಭಾಷೆ ಉಳಿವಿಗಾಗಿ ಬದ್ದವಾಗಿದೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಗೂ ಹೆಚ್ಚು ಹೂಳು ತುಂಬಿದ್ದು, ತೆರವು ಗೊಳಿಸಲು ಸರ್ಕಾರ ಮುಂದಾಗುತ್ತಿಲ್ಲ, ತುಂಗಭದ್ರಾ ಜಲಾಶಯ ವ್ಯಾಪ್ತಿಯ ರೈತರ ಪರವಾಗಿ ನಾನು, ನಮ್ಮ ಪಕ್ಷ ಶ್ರಮಿಸಲಿದೆ ಎಂದರು.

ಗ್ಯಾರಂಟಿಗಳ ಭರವಸೆಯಿಂದ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ, ಜನರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಆಗುತ್ತಿಲ್ಲ. ಗುಣಮಟ್ಟದ ಶಿಕ್ಷಣ, ಆರೋಗ್ಯ, ಕುಡಿವ ನೀರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಖಾತೆ ನಿಭಾಯಿಸುವಲ್ಲಿ ಅಸಮರ್ಥರು, ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸರ್ಕಾರ ಅಸ್ತಿತ್ವಕ್ಕೆ ಬಂದು ಸುಮಾರು ತಿಂಗಳು ಕಳೆದರೂ ನಯಾ ಪೈಸೆ ಕೊಟ್ಟಿಲ್ಲ. ಪ್ರಶ್ನಿಸಿದರೇ ಸರ್ಕಾರದ ಬಳಿ ಹಣವಿಲ್ಲ ಅಂತಾರೆ ನಾಚಿಕೆಯಾಗಬೇಕು. ಕಲಾವಿದರಿಗೆ ತಿಂಗಳ ಮಾಶಾಸನ ನೀಡಿಲ್ಲ. ಖಾತೆ ನಿಭಾಯಿಸಲು ಆಗೋಲ್ಲ ಅಂದ್ರೆ, ಸಚಿವರಾಗಿ ಇಲಾಖೆಗೆ ಹಣ ತರೋಕೆ ಆಗೋಲ್ಲ ಅಂದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!