ರಾಜ್ಯ ಸರ್ಕಾರ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ನೀಡಲಿ: ಸಂಸದ ಕಾರಜೋಳ ಆಗ್ರಹ

ಹೊಸದಿಗಂತ ವರದಿ,ಚಿತ್ರದುರ್ಗ :

ಚಿತ್ರನಟ ದರ್ಶನ್ ಗ್ಯಾಂಗ್‌ನಿಂದ ಹಲ್ಲೆಗೊಳಗಾಗಿ ಕೊಲೆಗೀಡಾಗಿರುವ ರೇಣುಕಾಸ್ವಾಮಿ ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡುವ ಮೂಲಕ ರಾಜ್ಯ ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

ನಗರದ ತುರುವನೂರು ರಸ್ತೆಯಲ್ಲಿರುವ ವೆಂಕಟೇಶ್ವರಸ್ವಾಮಿ ಬಡಾವಣೆಯಲ್ಲಿನ ಮೃತನ ನಿವಾಸಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಅವರು, ಮನೆಯ ಮಗ ರೇಣುಕಾಸ್ವಾಮಿ ಹತ್ಯೆಗೀಡಾಗಿರುವುದು ಆಘಾತ ಉಂಟು ಮಾಡಿದೆ. ಈಗ ಅವರ ಕುಟುಂಬಕ್ಕೆ ಆಧಾರ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಮೃತನ ಪತ್ನಿಗೆ ಕೆಲಸನೀಡಬೇಕೆಂದು ಒತ್ತಾಯಿಸಿದರು.

ಘಟನೆಯ ಬಗ್ಗೆ ಕೇಳಿ ಆಘಾತ ಉಂಟಾಗಿದೆ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಚಿತ್ರದುರ್ಗದಿಂದ ಕರೆದುಕೊಂಡು ಹೋಗಿ ಕೂಡಿ ಹಾಕಿ ಚಿತ್ರಹಿಂಸೆ ಮಾಡಿ ಕೊಲ್ಲಲಾಗಿದೆ. ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಈಗ ಚಿತ್ರದುರ್ಗದಲ್ಲಿ ನಡೆದಿದೆ. ಕಾನೂನಿನ ಭಯವಿಲ್ಲದಂತಾಗಿದೆ. ಹಾಗಾಗಿ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಬೇಕು ಎಂದರು.

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ನವೀನ್ ಚಾಲುಕ್ಯ, ಕಲ್ಲೇಶಯ್ಯ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!