5ಜಿ ನಿಜ ಪ್ರಯೋಜನ ಅರಿಯೋಣ: ಸಿನಿಮಾ ಡೌನ್ಲೋಡ್ ಫಾಸ್ಟ್ ಆಗ್ಲಿ ಅಂತ ತಂದಿದ್ದಲ್ಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ಟೋಬರ್ 1ರಂದು 5ಜಿ ಸೇವೆ ಭಾರತದಲ್ಲಿ ಲೋಕಾರ್ಪಣೆಗೊಂಡಿದೆ. 5ಜಿ ವಿವರಿಸುವ ಹೆಚ್ಚಿನವರು 4ಜಿಗಿಂತ ಎಷ್ಟು ಹೆಚ್ಚಿನ ವೇಗದಲ್ಲಿ 5ಜಿಯಲ್ಲಿ ವಿಡಿಯೊ ಡೌನ್ಲೋಡ್ ಆಗುತ್ತೆ ಅನ್ನೋ ಉದಾಹರಣೆಯನ್ನೇ ಹೆಚ್ಚಾಗಿ ಕೊಟ್ಟು, ಅದುವೇ ಬಹಳ ದೊಡ್ಡ ಯೂಸ್ ಕೇಸ್ ಎಂಬರ್ಥದಲ್ಲಿ ಸಾಮಾನ್ಯರು ಗ್ರಹಿಸುವಂತಾಗಿದೆ. ಸ್ಪೀಡ್ ಎಂಬುದೇ 5ಜಿಯ ಹೆಗ್ಗಳಿಕೆ ಹೌದಾದರೂ ತೀರ ಸಿನಿಮಾ ಡೌನ್ಲೋಡ್ ಉದಾಹರಣೆಗೆ ಜೋತು ಬಿದ್ದರೆ, ಇದೇನೋ ಚಿಕ್ಕ ಅಪ್ ಗ್ರೇಡ್ ಎಂಬ ತಪ್ಪರ್ಥ ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ 5ಜಿಯನ್ನು ಸರಳ ಉದಾಹರಣೆಗಳ ಮೂಲ ಗ್ರಹಿಸುತ್ತ ಅದರ ದೊಡ್ಡ ಕಾರ್ಯವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

  • ಪ್ರಾರಂಭದ ಹಂತದಲ್ಲಿ 5ಜಿ ಪ್ರಯೋಜನವಾಗುವುದು ಕೈಗಾರಿಕಾ ಬಳಕೆಗಳಿಗೆ. ಏಕೆಂದರೆ ನಾವೀಗ ಉಪಯೋಗಿಸುತ್ತಿರುವ ಮೊಬೈಲ್ ಫೋನ್ ಸೇರಿದಂತೆ ಬಹಳಷ್ಟು ಪರಿಕರಗಳು 5ಜಿಯಲ್ಲಿ ಕೆಲಸ ಮಾಡಲಾರವು. ಹೀಗಾಗಿ ರೊಬೊಟಿಕ್ಸ್, ಸರಕು ಸಾಗಣೆ ನಿರ್ವಹಣೆಯಂಥ ಜಟಿಲ ಕ್ಷೇತ್ರಗಳಲ್ಲಿ 5ಜಿ ಮೊದಲಿಗೆ ಪರಿಹಾರಗಳನ್ನು ಕೊಡುವುದಕ್ಕೆ ಬಳಕೆಯಾಗಲಿದೆ.
  • ಆರೋಗ್ಯ ಕ್ಷೇತ್ರದ ಉದಾಹರಣೆ ಮೂಲಕ 5ಜಿ ಪ್ರಯೋಜನ ಮತ್ತು ಬಳಕೆ ಮನದಟ್ಟು ಮಾಡಿಕೊಳ್ಳುವುದಾದರೆ… ಸಣ್ಣ ಪಟ್ಟಣವೊಂದರಲ್ಲಿ ಯಾವುದೋ ನಿರ್ದಿಷ್ಟ ಶಸ್ತ್ರಚಿಕಿತ್ಸೆ ಆಗುವುದಕ್ಕಿರುತ್ತದೆ. ಅಲ್ಲಿ ಪರಿಣತ ವೈದ್ಯರಿರೋದಿಲ್ಲ. ಆದರೀಗ 5ಜಿ ಉಪಯೋಗಿಸಿಕೊಂಡು ಬೆಂಗಳೂರು, ದೆಹಲಿಯಂಥ ದೊಡ್ಡ ಪಟ್ಟಣಗಳಲ್ಲಿರುವ ಪರಿಣತ ವೈದ್ಯನೇ ತಾನಿರುವಲ್ಲಿಂದ ದೂರದ ಶಸ್ತ್ರಚಿಕಿತ್ಸೆ ನೆರವೇರಿಸಬಹುದಾಗಿದೆ. ಇತ್ತ ಕಡೆಯಿಂದ ಕೆಲವು ಸಹಾಯಕರಿದ್ದರೆ ಸಾಕಾಗುತ್ತದೆ.
  • ಉದಾಹರಣೆ 2: ದೂರದೂರಿನ ಶಾಲೆಗಳಲ್ಲಿ 5ಜಿ ತರಂಗ ಹೀರುವ ಸಾಮರ್ಥ್ಯದ ಪರಿಕರಗಳನ್ನಿಟ್ಟರೆ, ಆಗ ಪಟ್ಟಣದಲ್ಲಿರುವ ಪರಿಣತ ಶಿಕ್ಷಕ ಗಣಿತವನ್ನೋ, ಭೌತಶಾಸ್ತ್ರವನ್ನೋ ಆ ಹಳ್ಳಿ ಶಾಲೆಯಲ್ಲಿ ತನ್ನ ಹಾಲೊಗ್ರಾಮ್ ಪ್ರತ್ಯಕ್ಷವಾಗಿಸುವ ಮೂಲಕ ಪಾಠ ಮಾಡಬಹುದು. ಗಮನಿಸಿ, ವಿಡಿಯೊ ಮೂಲಕ ಪಾಠಕ್ಕಿಂತ ಇದು ಬಹಳ ಭಿನ್ನ. ಶಿಕ್ಷಕನ ಅವತಾರವೇ ಹಾಲೊಗ್ರಾಮ್ ರೂಪದಲ್ಲಿ ಉಪಸ್ಥಿತಿ ತೋರಿಸುತ್ತದಲ್ಲದೇ, ಪರಸ್ಪರ ಸಂವಹನದ ಸಾಧ್ಯತೆಗಳೂ ಹೆಚ್ಚಾಗುತ್ತವೆ. ದೂರದಲ್ಲೆಲ್ಲೋ ಕುಳಿತು ಶಿಕ್ಷಕ ಪಾಠ ಮಾಡುತ್ತಿದ್ದಾರೆಂಬ ಭಾವನೆ ಬರದು. ಇದರಿಂದ ದೇಶ-ರಾಜ್ಯಗಳ ಬೇರೆ ಬೇರೆ ಭಾಗಗಳಲ್ಲಿರುವ ಶಿಕ್ಷಕರನ್ನೋ, ಉಪನ್ಯಾಸಕರನ್ನೋ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
  • ಮೇಲೆ ಹೇಳಿದಂಥ ಹಲವು ವಿಭಾಗಗಳಲ್ಲಿ ಸಾಮೂಹಿಕ ಉಪಯೋಗದ ನಂತರ 5ಜಿ ನಮ್ಮ ವೈಯಕ್ತಿಕ ಉಪಯೋಗಕ್ಕೆ ವಿಸ್ತರಿಸಿಕೊಳ್ಳುವ ನಿರೀಕ್ಷೆ ಇದೆ. ಆಗ ಮೆಟಾವರ್ಸ್ ಯುಗ ಆರಂಭವಾಗಿ ನಮ್ಮ ಡಿಜಿಟಲ್ ಅವತಾರಗಳು ಜಗತ್ತಿನ ಯಾವುದೇ ಭಾಗಕ್ಕೆ ಪ್ರಯಣಿಸಿ ಹಲವು ಅನುಭವಗಳನ್ನು ಹೊಂದಬಲ್ಲ ಲೋಕ ತೆರೆದುಕೊಳ್ಳಲಿದೆ. ಇದು ಕ್ರಿಪ್ಟೊ, ಬ್ಲಾಕ್ ಚೈನ್ ಇತ್ಯಾದಿ ತಂತ್ರಜ್ಞಾನಗಳನ್ನೆಲ್ಲ ಉಪಯೋಗಿಸಿಕೊಂಡು ನಮ್ಮ ನಡುವೆಯೇ ನಾವು ಕಟ್ಟಿಕೊಳ್ಳಲಿರುವ ಸಮಾನಾಂತರ ವಿಶ್ವ ಎಂದು ಹೇಳಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!