ಗ್ರಂಥಾಲಯವಾದ ಬಸ್ ನಿಲ್ದಾಣ -ಪುನೀತ ಅಭಿಮಾನಿ ಬಳಗದ ಸತ್ಕಾರ್ಯ

ಗಣೇಶ ಜೋಶಿ ಸಂಕೊಳ್ಳಿ

ಕುಮಟಾ: ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ ಹೊಕ್ಕೇರಿ ಗ್ರಾಮೀಣ ಭಾಗದ ಬಸ್‌ ತಂಗುದಾಣ, ಪ್ರಯಾಣಿಕರ ಜ್ಞಾನದ ದಾಹ ನೀಗಿಸುವ ಗ್ರಂಥಾಲಯದಂತೆ ಬದಲಾಗಿದೆ.

ಸಾಮಾನ್ಯವಾಗಿ ತಂಗುದಾಣಗಳು ಕಸಕಡ್ಡಿಗಳಿಂದ ತುಂಬಿಕೊಂಡು ಪ್ರಯಾಣಿಕರು ಕೂಡ ತಂಗುದಾಣದಲ್ಲಿ ನಿಲ್ಲಲೂ ಬೇಸರಿಸುವ ಸ್ಥಿತಿಯಲ್ಲಿರುವುದಕ್ಕಿಂತ ತೀರಾ ಭಿನ್ನವಾಗಿ, ಅತ್ಯಂತ ಶುಚಿಯಾಗಿ ಹಾಗೂ ಗ್ರಂಥಾಲಯದ ರೀತಿಯಲ್ಲಿಯೇ ಈ ತಂಗುದಾಣ ಕಂಗೊಳಿಸುತ್ತಿದೆ.

ಪುನೀತ್ ರಾಜಕುಮಾರ್ ಅಭಿಮಾನಿ ಬಳಗವು ಬಸ್ ನಿಲ್ದಾಣದಲ್ಲಿ ಚಿಕ್ಕದೊಂದು ವಾಚನಾಲಯ ತೆರೆದಿದೆ. ಬಸ್ ನಿಲ್ದಾಣವನ್ನೂ ಶುಚಿಯಾಗಿಟ್ಟು, ಪುಸ್ತಕ ಭಂಡಾರವನ್ನೇ ಹೊಂದಿಸಿರುವ ಈ ಬಸ್ ನಿಲ್ದಾಣ ಯಾವುದೇ ಪುಸ್ತಕಮನೆಗೂ ಕಡಿಮೆಯಿಲ್ಲ ಎಂಬಂತಿದೆ.

ಬಸ್‌ಗಾಗಿ ಕಾಯುವ ಪ್ರಯಾಣಿಕರು, ಹಾಯಾಗಿ ಕುಳಿತು ತಮಗಿಷ್ಟವಾದ ಪುಸ್ತಕ ಓದುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದಾರೆ. ಪ್ರಯಾಣಕ್ಕೆಂದು ಬರುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕೂತು ಮೊಬೈಲ್‌ನಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಗ್ರಂಥಾಲಯದಲ್ಲಿ ಇರುವ ವಿವಿಧ ಪುಸ್ತಕಗಳನ್ನು ಶೃದ್ಧೆಯಿಂದ ಓದುವ ಹವ್ಯಾಸ ರೂಢಿಸಿಕೊಂಡಿರುವುದು ಇಲ್ಲಿನ ವಿಶೇಷವಾಗಿದೆ.

ಪ್ರತಿನಿತ್ಯ ಈ ಗ್ರಾಮದಿಂದ ಕುಮಟಾ ಪಟ್ಟಣಕ್ಕೆ ಸೇರಿದಂತೆ ಶಾಲಾ ಕಾಲೇಜಿಗೆ ತೆರಳುವ ಪ್ರತಿಯೊಬ್ಬರೂ ಬಂದು ಬಸನಲ್ಲಿ ಪ್ರಯಾಣಿಕಸಬೇಕು. ಗ್ರಾಮೀಣ ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ಬರುತ್ತದೆ ಎಂದು ಹೇಳಲಾಗದು. ಹೀಗಿದ್ದಾಗಲೂ ಇಲ್ಲಿಯ ಪ್ರಯಾಣಿಕರ ಅತ್ಯಲ್ಪ ಸಮಯವೂ ಸದುಪಯೋಗವಾಗುವುದನ್ನು ಕಾಣಬಹುದು.

ಇಲ್ಲಿ ಕೇವಲ ಕಥೆ, ಕಾದಂಬರಿ, ಚುಟುಕು ಪುಸ್ತಕಗಳಷ್ಟೇ ಅಲ್ಲದೇ ಜ್ಞಾನಪೀಠ ಪುರಸ್ಕಾರ ಪಡೆದ ಹಾಗೂ ಸಾಧಕರ ಪುಸ್ತಕಗಳ ಜೊತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನೂ ಇಡಲಾಗಿದೆ. ಜೊತೆಗೆ ಹಿರಿಯರ ಅಭಿರುಚಿಯ ಹತ್ತಾರು ಪುಸ್ತಕಗಳಿವೆ. ಪುನೀತ ರಾಜಕುಮಾರ ಅಭಿಮಾನಿ ಬಳಗದ ಯುವಕರ ತಂಡ ಗ್ರಾಮದ ಹಿರಿಯರ ಜೊತೆ ಚರ್ಚೆ ನಡೆಸಿ ಎಲ್ಲರ ಒಪ್ಪಿಗೆ ಪಡೆದು ಇದೀಗ ವಿನೂತನವಾಗಿ ಬಸ್ ತಂಗುದಾಣವನ್ನೇ ಜ್ಞಾನದೇಗುಲವಾಗಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!