ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನುಷ್ಯನ ಆಯುಷ್ಯ ಚಿಕ್ಕದು, ಪ್ರಕರಣಮುಗಿದ ಬಳಿಕ ಕಕ್ಷಿದಾರ ತಮ್ಮ ಜೀವನವನ್ನು ಮರುನಿರ್ಮಾಣ ಮಾಡಿಕೊಳ್ಳಬೇಕು. ಹೀಗಾಗಿ ವೈವಾಹಿಕ ಪ್ರಕರಣಗಳನ್ನು ಬೇಗ ವಿಚಾರಿಸಿ ತೀರ್ಪು ನೀಡಿ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ವ್ಯಕ್ತಿಯೊಬ್ಬರು ತಮ್ಮನ್ನು ವಿವಾಹದಿಂದ ಬಿಡುಗಡೆಗೊಳಿಸಬೇಕು ( ಡಿವೋರ್ಸ್ ) ಅಥವಾ ತಮ್ಮ ವಿವಾಹವನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ಕೋರ್ಟ್, ಈ ಮಾತನ್ನು ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ‘ತ್ವರಿತ ನ್ಯಾಯದಾನದ ಹಕ್ಕನ್ನು ಸುಪ್ರೀಂ ಕೋರ್ಟ್ ( ಕಲಂ 21ರ ಅಡಿಯಲ್ಲಿ ) ಸಾಂವಿಧಾನಿಕ ಗ್ಯಾರಂಟಿ ಎಂದು ಗುರುತಿಸಿದೆ. ಹಾಗಾಗಿ ಪ್ರಕರಣದ ತ್ವರಿತ ವಿಲೇವಾರಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು , ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಆದಷ್ಟು ಬೇಗನೇ ವಿಲೇವಾರಿ ಮಾಡಲು ನನ್ನ ಸಹಮತವಿದೆ ಎಂದು ಹೇಳಿದ್ದಾರೆ. ತ್ವರಿತ ವಿಲೇವಾರಿಯಿಂದ ವ್ಯಕ್ತಿಗಳು ತಮ್ಮ ಬದುಕನ್ನು ಮರಳಿ ಕಟ್ಟಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಇತಿಹಾಸಕಾರ ಥಾಮಸ್ ಕಾರ್ಲೈಲ್ ಅವರ ಹೇಳಿಕೆಉಲ್ಲೇಖಿಸಿರುವ ನ್ಯಾಯಾಧೀಶರು, ‘ಜೀವನವು ತುಂಬಾ ಚಿಕ್ಕದಾಗಿದೆ’ ಎಂದು ಹೇಳಿದ್ದಾರೆ.
ವೈವಾಹಿಕ ಪ್ರಕರಣವನ್ನು ಒಂದು ವರ್ಷದೊಳಗೆ ಮುಗಿಸಲು ನ್ಯಾಯಾಲವು ಪ್ರಯತ್ನಿಸಬೇಕು. ಆದಷ್ಟು ಬೇಗನೇ ವಿಲೇವಾರಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಅಂತಹ ತೀರ್ಪು ನೀಡಿದರೆ, ವ್ಯಕ್ತಿಗಳು ತಮ್ಮ ಜೀವನವನ್ನು ಮರಳಿ ಕಟ್ಟಿಕೊಳ್ಳಲು ಅವಕಾಶ ಸಿಗುತ್ತದೆ. ಅಂತಹ ಪ್ರಕರಣಗಳ ವಿಲೇವಾರಿ ವಿಳಂಬವು ಕಕ್ಷಿದಾರರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕುರಿತು ಯಾವುದೇ ಚರ್ಚೆಯ ಅಗತ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.