ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಮಿತಾಭ್ ಬಚ್ಚನ್ 82ರ ಹರೆಯದಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.
ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್ ಬಚ್ಚನ್ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ.
ಇನ್ನು ತಾವು ನಡೆಸಿಕೊಂಡು ಬರುತ್ತಿರುವ ಕೌನ್ ಬನೇಗಾ ಕರೋರ್ಪತಿ ಕಾರ್ಯಕ್ರಮದಲ್ಲಿ ಅವರು ಸಾಕಷ್ಟು ತಮಾಷೆ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ತಮ್ಮ ಪತ್ನಿ ಜಯಾ ಬಚ್ಚನ್ ಬಗ್ಗೆ ಹೇಳಿದ್ದಾರೆ. ಪತ್ನಿ ಜಯಾ ಬಚ್ಚನ್, ಮಗ ಅಭಿಷೇಕ್ ಬಚ್ಚನ್ ಅವರಿಂದ ಎಂದಾದರೂ ಬೈಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಅವರು ತಮಾಷೆಯಾಗಿ ನೀಡಿರುವ ಉತ್ತರ ಇದೀಗ ವೈರಲ್ ಆಗುತ್ತಿದೆ.
ಸ್ಪರ್ಧಿಯೊಬ್ಬರು “ನೀವು ತಡ ರಾತ್ರಿಯ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೀರಿ. ಜಯಾ ಮೇಡಂ ಮತ್ತು ಅಭಿಷೇಕ್ ಭೈಯ್ಯಾ ಬೈಯುವುದಿಲ್ಲವೇ?’ ಎಂದು ಪ್ರಶ್ನಿಸಿದ್ದರು. ಆಗ ಅಮಿತಾಭ್ ಬಹುತೇಕ ಎಲ್ಲ ಗಂಡಂದಿರ ಹಾಗೆ ನನಗೂ ಹೆಂಡ್ತಿ ಅಂದ್ರೆ ಭಯನೇ. ಆದ್ರೆ ವಿಷಯ ಬೇರೆ ಬೇರೆ ಇರುತ್ತೆ ಅಷ್ಟೇ. ನನ್ನ ವಿಷಯದಲ್ಲಿ ಹೇಳುವುದಾದರೆ, ನನ್ನ ಹೆಂಡತಿ ಭಯದಿಂದಲ್ಲೇ ಆಕೆ ಮಲಗಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ತಡರಾತ್ರಿಯ ಸಮಯದಲ್ಲಿ ಪೋಸ್ಟ್ ಮಾಡುತ್ತೇನೆ’ ಎಂದು ಹೇಳಿ ನಕ್ಕು ಎಲ್ಲರನ್ನೂ ನಗಿಸಿದರು.
ಇದೇ ಕರೋಡ್ ಪತಿ-15ರ ಸೀಸನ್ನಿನಲ್ಲಿ ಕೆಲ ದಿನಗಳ ಹಿಂದೆಯೂ ಅಮಿತಾಭ್ ಇಂಥದ್ದೇ ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದರು. ಬಂಗಾಳಿ ಮಹಿಳೆಯೊಬ್ಬರು ಸ್ಪರ್ಧಿಯಾಗಿದ್ದ ಆ ಎಪಿಸೋಡ್ ನಲ್ಲಿ ಅಮಿತಾಭ್, ‘ಜೀವನದಲ್ಲಿ ಅನುಭವವಾಗುತ್ತ ಒಂದು ವಿಚಾರವನ್ನು ಅರಿತಿದ್ದೇನೆ, ಅದೆಂದರೆ, ಬಂಗಾಳಿ ಮಹಿಳೆಯೊಂದಿಗೂ ಎಂದಿಗೂ ವಾದಕ್ಕೆ ಬೀಳಬಾರದು. ಪತ್ನಿ ಜಯಾ ಬಚ್ಚನ್ ಕೂಡ ಬಂಗಾಳಿಯಾಗಿದ್ದು, ಅವರೊಂದಿಗೆ ವಾದಕ್ಕೆ ನಿಂತರೆ ತಾವು ಎಂದಿಗೂ ಗೆದ್ದದ್ದಿಲ್ಲ. ಪ್ರತಿಯೊಂದು ಸಮಯದಲ್ಲೂ ಜಯಾ ವಿಶೇಷ ರೀತಿಯಲ್ಲಿ ವಾದ ಮಂಡಿಸುತ್ತಾರೆ’ ಎಂದು ಹೇಳಿ ವೀಕ್ಷಕರನ್ನು ನಗೆಗಡಲಿಗೆ ದೂಡಿದ್ದರು.