ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮುಗಿಲೆದ್ದ ತ್ರಿಭಾಷಾ ವಿವಾದದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಿಂದಿ ಭಾಷೆಯನ್ನು ಬಲವಂತವಾಗಿ ಅಳವಡಿಸಿಕೊಳ್ಳುವುದರಿಂದ ಕೆಲವು ವರ್ಷಗಳಲ್ಲಿ 25 ಉತ್ತರ ಭಾರತದ ಭಾಷೆಗಳನ್ನು ಹಿಂದಿ ನುಂಗಿದೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಸಮಾಜವನ್ನು ವಿಭಜಿಸುವ ಇಂತಹ ಪ್ರಯತ್ನಗಳಿಂದ ಉತ್ತಮ ಆಡಳಿತ ನಡೆಸಲು ಅಸಾಧ್ಯ.ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ವಿಷಯದ ಬಗ್ಗೆ ಏನು ಹೇಳುತ್ತಾರೆಂದು ತಿಳಿಯುವುದು ಆಸಕ್ತಿದಾಯಕವಾಗಿರುತ್ತದೆ. ಹಿಂದಿ ಮಾತನಾಡುವ ಸ್ಥಾನದ ಸಂಸದರಾಗಿ ರಾಹುಲ್ ಗಾಂಧಿ ಈ ಹಿಂದಿ ಹೇರಿಕೆಯ ಆರೋಪವನ್ನು ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ತ್ರಿಭಾಷಾ ನೀತಿಯ ಕುರಿತು “ಹಿಂದಿ ಮುಖವಾಡ ಮತ್ತು ಸಂಸ್ಕೃತದ ಹೇರಿಕೆಯ ಗುಪ್ತ ಉದ್ದೇಶವಿದೆ” ಎಂದು ಆರೋಪಿಸಿದ್ದರು. ಭೋಜ್‌ಪುರಿ, ಮೈಥಿಲಿ, ಅವಧಿ, ಬ್ರಜ್, ಬುಂಡೇಲಿ, ಗರ್ವಾಲಿ, ಕುಮಾವೋನಿ, ಮಗಾಹಿ, ಮಾರ್ವಾರಿ, ಮಾಲ್ವಿ, ಛತ್ತೀಸ್‌ಗಢಿ, ಸಂಥಾಲಿ, ಅಂಗಿಕಾ, ಹೋ, ಖರಿಯಾ, ಖೋರ್ಥಾ, ಕುರ್ಮಾಲಿ, ಕುರುಖ್ ಮತ್ತು ಮುಂಡಾರಿ ಸೇರಿದಂತೆ ಈಗ ಉಳಿವಿಗಾಗಿ ಹೋರಾಡುತ್ತಿರುವ ಹಲವಾರು ಭಾಷೆಗಳನ್ನು ತಮಿಳುನಾಡು ಮುಖ್ಯಮಂತ್ರಿ ಪಟ್ಟಿ ಮಾಡಿದ್ದರು. ಇವುಗಳ ಮೇಲೆ ಹಿಂದಿಯನ್ನು ಹೇರಲಾಗಿದೆ ಎಂದು ಟೀಕಿಸಿದ್ದರು.