ಮೆಸ್ಸಿ ಮಿಂಚು, ಅಲ್ವಾರೆಜ್ ಮ್ಯಾಜಿಕ್: ಕ್ರೊಯೇಷಿಯಾಗೆ ಸೋಲುಣಿಸಿ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಲಿಯೋನೆಲ್ ಮೆಸ್ಸಿ, ಜೂಲಿಯನ್ ಅಲ್ವಾರೆಜ್ ಅವರ ಕಾಲ್ಚಳಕದಲ್ಲಿ ಮೂಡಿಬಂದ ಅದ್ಭುತ ಗೋಲುಗಳ ನೆರವಿನಿಂದ ಕ್ರೊಯೇಷಿಯಾ ವಿರುದ್ಧ 3-0 ಅಂತರದಿಂದ ಗೆದ್ದ ಎರಡು ಬಾರಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ 6ನೇ ಬಾರಿಗೆ ವಿಶ್ವಕಪ್ ಫೈನಲ್‌ ಪ್ರವೇಶಿಸಿದೆ.
ಲುಸೈಲ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಸಾವಿರಾರು ಪ್ರೇಕ್ಷಕರಿಗೆ ಅರ್ಜೆಂಟೀನಾ ನಿರಾಸೆ ಮಾಡಲಿಲ್ಲ.
ಖ್ಯಾತಿಗೆ ತಕ್ಕ ಅದ್ಭುತ ಆಟವಾಡಿದ ಅರ್ಜೆಂಟೀನಾ ಕ್ಯಾಪ್ಟನ್ ಮೆಸ್ಸಿ ಪಂದ್ಯದ 34ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸುತ್ತಿದ್ದಂತೆ ಕ್ರೀಡಾಂಗಣ ಹರ್ಷೋಗ್ಘಾರಗಳಿಂದ ತುಂಬಿಹೋಯಿತು. ಇದಾದ ಬಳಿಕ ಮತ್ತೋರ್ವ ಸ್ಟಾರ್‌ ಆಟಗಾರ ಜೂಲಿಯನ್ ಅಲ್ವಾರೆಜ್ 39ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಕ್ರೋವೇಶಿಯಾವನ್ನು ಒತ್ತಡಕ್ಕೆ ಸಿಲುಕಿಸಿದರು. ನಂತರ ಆಟದ 69 ನೇ ನಿಮಿಷದಲ್ಲಿ ಜೂಲಿಯಾನ್​ ಅಲ್ವಾರೆಜ್ ಮತ್ತೊಂದು ಗೋಲು ಬಾರಿಸುವುದರೊಂದಿಗೆ ಅರ್ಜೆಂಟೀನಾ ಫೈನಲ್‌ ಕನಸು ನನಸಾಯಿತು.
ಬುಧವಾರ ನಡೆಯಲಿರುವ ಮತ್ತೊಂದು ಸೆಮಿ-ಫೈನಲ್ ಘರ್ಷಣೆಯಲ್ಲಿ ಫ್ರಾನ್ಸ್ ಮತ್ತು ಮೊರಾಕೊ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆದ್ದವರು ಭಾನುವಾರದ ಫೈನಲ್‌ನಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದ್ದಾರೆ.
ಮೂಲಕ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಎರಡನೇ ಬಾರಿಗೆ ಫೈನಲ್ ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮೊದಲು 2014 ರಲ್ಲಿ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಆದರೆ ಫೈನಲ್​ನಲ್ಲಿ ಜರ್ಮನಿ ಎದುರು ಸೋತಿದ್ದರಿಂದ ಪ್ರಶಸ್ತಿ ಕನಸು ನನಸಾಗಿರಲಿಲ್ಲ. ಅರ್ಜೆಂಟೀನಾ 1978 ಮತ್ತು 1986ರಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿತ್ತು. ಕತಾರ್‌ ನಲ್ಲಿ 3ನೇ ಬಾರಿ ವಿಶ್ವಕಪ್‌ ಎತ್ತಿಹಿಡಿಯುವ ಮೂಲಕ ಫುಟ್ಬಾಲ್‌ ದಂತಕತೆ ಮೆಸ್ಸಿಗೆ ಆವಿಸ್ಮರಣೀಯ ವಿದಾಯ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!