ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಒಟ್ಟಾರೆ ಮದ್ಯ ಮಾರಾಟ ಟ್ರೆಂಡ್ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ, ಕಳೆದ ವರ್ಷ ಭಾರಿ ಕುಸಿತ ಕಂಡಿದೆ.
ಅಬಕಾರಿ ಇಲಾಖೆಯೇ ನೀಡಿರುವ ಕಳೆದ ವರ್ಷದ ಏಪ್ರಿಲ್- ಡಿಸೆಂಬರ್ ವರೆಗಿನ ಅಂಕಿ-ಅಂಶಗಳ ಪ್ರಕಾರ, 2024-25 ರ ಅವಧಿಗೆ ಮದ್ಯ ಮಾರಾಟದಿಂದ 38.525 ಕೋಟಿ ರೂಪಾಯಿ ಟಾರ್ಗೆಟ್ ನಿಗದಿ ಮಾಡಲಾಗಿತ್ತು. ಆದರೆ ಈ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಬಂದಿರುವ ಆದಾಯ 26.633 ಕೋಟಿಯಷ್ಟೇ. 2023-2024 ರ ಆರ್ಥಿಕ ವರ್ಷದಲ್ಲಿ ಇಲಾಖೆ 34.500 ಕೋಟಿ ಆದಾಯದ ಗುರಿ ನಿಗದಿಪಡಿಸಿತ್ತು. ಆದರೆ ಸಂಗ್ರಹವಾಗಿದ್ದು ಮಾತ್ರ 24.455 ಕೋಟಿ ರೂ!, 2023-24 ರಲ್ಲಿ ನಿಗದಿಯಾಗಿದ್ದ ಟಾರ್ಗೆಟ್ ನ 73.78% ರಷ್ಟು ಮಾತ್ರ ಸಂಗ್ರಹವಾಗಿತ್ತು.
ಡಿಸೆಂಬರ್ ತಿಂಗಳು ಕ್ರಿಸ್ ಮಸ್, ಹೊಸ ವರ್ಷಾಚರಣೆಗಳು ಇರುವುದರಿಂದ ಈ ತಿಂಗಳಲ್ಲಿ ಸಹಜವಾಗಿಯೇ ಮದ್ಯ ಮಾರಾಟ ಏರುಗತಿಯಲ್ಲಿರುತ್ತದೆ ಎಂಬುದು ನಿರೀಕ್ಷೆ ಇತ್ತು. ಆದರೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಕರ್ನಾಟಕ ರಾಜ್ಯ ಪಾನೀಯಗಳ ನಿಗಮ ನಿಯಮಿತ 61.82 ಲಕ್ಷ ಕೇಸ್ ಬಾಕ್ಸ್ ಗಳನ್ನು ಮಾರಾಟ ಮಾಡಿದೆ. 2023 ರಲ್ಲಿ 64.35 ಲಕ್ಷ ಬಾಕ್ಸ್ ಗಳು ಮಾರಾಟವಾಗಿತ್ತು. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಶೇ.3.93 ರಷ್ಟು ಕುಸಿತ ದಾಖಲಿಸಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಕೆಎಸ್‌ಬಿಸಿಎಲ್ 2024 ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 527.82 ಲಕ್ಷ ಕೇಸ್ ಬಾಕ್ಸ್ ಗಳನ್ನು ಮಾರಾಟ ಮಾಡಿದೆ. 2023 ರ ಇದೇ ಅವಧಿಯಲ್ಲಿ 533.26 ಲಕ್ಷ ಸಿಬಿ ಮಾರಾಟವಾಗಿದ್ದು, 1.02% ನಷ್ಟು ಕುಸಿತ ದಾಖಲಿಸಿದೆ. ಬಿಯರ್ ಮಾರಾಟ ಏಪ್ರಿಲ್ ಮತ್ತು ಡಿಸೆಂಬರ್ 2024 ರ ನಡುವೆ 8.22% ಹೆಚ್ಚಳವನ್ನು ಕಂಡಿದೆ. ಈ ವರ್ಷ 351.07 ಲಕ್ಷ ಸಿಬಿಗಳು ಮಾರಾಟವಾಗಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 324.4 ಲಕ್ಷ ಸಿಬಿಗಳು ಮಾರಾಟವಾಗಿತ್ತು.