ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಣಿಜ್ಯ ವಾಹನ ಚಾಲಕರಿಗೊಂದು ಸಿಹಿ ಸುದ್ದಿ, ಲಘು ಮೋಟಾರು ವಾಹನ(ಎಲ್‌ಎಂವಿ)ದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯೂ 7,500 ಕೆಜಿ ತೂಕದವರೆಗಿನ ಸಾರಿಗೆ ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಈ ಆದೇಶ ನೀಡಿದೆ.
ಲಘು ಮೋಟಾರು ವಾಹನದ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು 7,500 ಕೆಜಿಗಿಂತ ಹೆಚ್ಚಿಲ್ಲದ ಭಾರವಿಲ್ಲದ ಸಾರಿಗೆ ವಾಹನವನ್ನು ಓಡಿಸಲು ಅರ್ಹರೇ ಎಂಬ ಕಾನೂನು ಪ್ರಶ್ನೆಗೆ ಪೀಠವು ಉತ್ತರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ರಾಯ್ ಅವರೊಂದಿಗೆ ಪೀಠದಲ್ಲಿ ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ, ಪಂಕಜ್ ಮಿಥಾಲ್ ಮತ್ತು ಮನೋಜ್ ಮಿಶ್ರಾ ಕೂಡ ಇದ್ದರು.
ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಎಲ್‌ಎಂವಿ ಪರವಾನಗಿ ಹೊಂದಿರುವವರು ಕಾರಣ ಎಂದು ಸಾಬೀತುಪಡಿಸಲು ಯಾವುದೇ ಡೇಟಾ ಲಭ್ಯವಿಲ್ಲ. ಈ ಸಮಸ್ಯೆಯು ಲಘು ಮೋಟಾರು ವಾಹನ ಪರವಾನಗಿ ಹೊಂದಿರುವ ಚಾಲಕರ ಜೀವನೋಪಾಯಕ್ಕೆ ಸಂಬಂಧಿಸಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಲಘು ಮೋಟಾರು ವಾಹನ ಲೈಸೈನ್ಸ್ ಹೊಂದಿರುವ ಚಾಲಕರು 7,500 ಕೆಜಿ ಸಾಮರ್ಥ್ಯದ ವಾಹನ ಚಲಾಯಿಸಿ ಅಪಘಾತಗಳಾದಾಗ ವಿಮಾ ಕಂಪನಿಗಳು ಪರಿಹಾರ ಒದಗಿಸಿರಲಿಲ್ಲ. ಈ ವಾಹನಗಳು ಎಲ್‌ವಿಎಂ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದವು. ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್ (MACT) ಮತ್ತು ನ್ಯಾಯಾಲಯಗಳು ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ವಿಮಾ ಕ್ಲೈಮ್‌ಗಳನ್ನು ಪಾವತಿಸಲು ಆದೇಶಿಸುತ್ತಿವೆ. ಇದರ ವಿರುದ್ಧ ಬಜಾಜ್ ಅಲೆಯನ್ಸ್ ಸೇರಿದಂತೆ ಹಲವು ವಿಮಾ ಕಂಪೆನಿಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.