ಹೊಸದಿಗಂತ ವರದಿ,ಕಾರವಾರ:
ಬಹು ವರ್ಷದ ಬೇಡಿಕೆಯಾಗಿದ್ದ ಹೈದರ್‌ಘಾಟ್ ರಸ್ತೆ ನಿರ್ಮಾಣದಿಂದ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್. ನಾಯ್ಕ ಹೇಳಿದರು.
ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೈದರಘಾಟ್‌ದಿಂದ ಅಷ್ಟ ಸಿದ್ದಿವಿನಾಯಕ ದೇವಸ್ಥಾನ ಸೇರುವ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಷ್ಟ ಸಿದ್ದಿವಿನಾಯಕ ಹಾಗೂ ಶ್ರೀ ಗಾಯತ್ರಿ ದೇವಿಯ ಶಕ್ತಿ ಅಪಾರವಾಗಿದ್ದು, ಬೇರೆ ಬೇರೆ ಊರುಗಳಿಂದ ಇಲ್ಲಿಯ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ದೇವರಿಗೆ ಅಪಾರ ಭಕ್ತ ಸಮೂಹವಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗುತ್ತಿತ್ತು. ಇಲ್ಲಿಯ ಜನರ ಇಚ್ಚೆಯಂತೆ ರಸ್ತೆ ನಿರ್ಮಾಣವಾಗಲಿದೆ ಎಂದರು.
ಅಲ್ಲದೇ, ರಾತ್ರಿ ಹೊತ್ತು ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಭಯದಿಂದಲೇ ಓಡಾಡುವ ಸ್ಥಿತಿ ಇತ್ತು. ಅದು ಈಗ ನಿವಾರಣೆಯಾಗಲಿದೆ. ಹೈದರಘಾಟ ರಸ್ತೆ ನಿರ್ಮಾಣದಿಂದ ಭಕ್ತರಿಗೆ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಆಶಾ ನಾಯ್ಕ ಮಾತನಾಡಿ, ಹೈದರ್‌ಘಾಟ್ ರಸ್ತೆ ನಿರ್ಮಾಣವಾಗುವುದು ಅತಿ ಅವಶ್ಯವಾಗಿತ್ತು. ಅದರಂತೆ ಈ ರಸ್ತೆ ನಿರ್ಮಾಣಕ್ಕೆ ನಮ್ಮ ಶಾಸಕರು ಅನುದಾನವನ್ನು ಒದಗಿಸಿದ್ದಾರೆ. ಅಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅವಶ್ಯಕವಾಗಿರುವ ಕಡೆಗಳಲ್ಲಿ ಕಾಮಗಾರಿಗಳಿಗೆ ಶಾಸಕರು ಅನುದಾನವನ್ನು ಒದಗಿಸಿದ್ದಾರೆ. ಶೀಘ್ರದಲ್ಲಿ ಎಲ್ಲ ಕಾಮಗಾರಿಗಳಿಗೆ ಚಾಲನೆ ದೊರಕಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷರು, ಅಮದಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಅಷ್ಟಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳು, ಗ್ರಾ.ಪಂ.ಸದಸ್ಯರು ಹಾಗೂ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಊರ ನಾಗರಿಕರು ಉಪಸ್ಥಿತರಿದ್ದರು.
2021-22 ನೇ ಸಾಲಿನ ರಾಜ್ಯ ಹೆದ್ದಾರಿ ರಸ್ತೆ ಸುರಕ್ಷತಾ ಕಾಮಗಾರಿಗಳ ಅಡಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಅಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೈದರ್‌ಘಾಟದಿಂದ ಅಷ್ಟ ಸಿದ್ದಿವಿನಾಯಕ ದೇವಸ್ಥಾನ ಸೇರುವ ಕಿ.ಮೀ. 1.10 ದಿಂದ ಕಿ.ಮೀ.3.30ವರೆಗೆ ಅಂದಾಜು ಮೊತ್ತ 250.00 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ.