October 13, 2026
Tuesday, October 13, 2026
spot_img

ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ತಾರ್ಕಿಕ ಅಂತ್ಯ?: ಆಂಧ್ರ ಸಿಎಂ ಜೊತೆ ವಿಜಯ್ ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳ ನಡುವಿನ ದಶಕಗಳ ನದಿ ನೀರು ಹಂಚಿಕೆ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಒಂದು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ.

 ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಗಳವಾರ ವಿಜಯವಾಡದಲ್ಲಿ ಮುಖಾಮುಖಿಯಾಗಿದ್ದು, ಕೃಷ್ಣಾ ನದಿ ನೀರು ಹಂಚಿಕೆ ಸಮಸ್ಯೆಗಳು ಹಾಗೂ ದಕ್ಷಿಣ ಭಾರತದ ಮಹತ್ವದ ನದಿ ಜೋಡಣೆ ಯೋಜನೆಗಳ ಕುರಿತು ಮಹತ್ವದ ಸಭೆ ನಡೆಸಿದ್ದಾರೆ.

ಚೆನ್ನೈ ಜಲಕ್ಷಾಮ ನಿವಾರಣೆಗೆ ‘ತೆಲುಗು ಗಂಗಾ’ ಪುನಶ್ಚೇತನ

ಸಭೆಯ ಪ್ರಮುಖ ಉದ್ದೇಶ ‘ತೆಲುಗು ಗಂಗಾ ಪ್ರಾಜೆಕ್ಟ್’ ಅಡಿಯಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈ ನಗರಕ್ಕೆ ಸರಬರಾಜಾಗುತ್ತಿರುವ ಕೃಷ್ಣಾ ನದಿಯ ನೀರಿನ ಕೊರತೆಯನ್ನು ನೀಗಿಸುವುದರ ಮೇಲಿತ್ತು. ತಮಿಳುನಾಡು ಸರ್ಕಾರವು ತನಗೆ ವಾರ್ಷಿಕವಾಗಿ ನಿಗದಿಯಾಗಿರುವ ಒಟ್ಟು ನೀರಿನ ಪಾಲಿನಲ್ಲಿ ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ ಪ್ರಸ್ತುತ ಪಡೆಯುತ್ತಿರುವುದಾಗಿ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತಮಿಳುನಾಡಿಗೆ ಸಿಗಬೇಕಾದ ಹಕ್ಕಿನ ನೀರನ್ನು ಯಾವುದೇ ಅಡೆತಡೆಯಿಲ್ಲದೆ ವ್ಯವಸ್ಥಿತವಾಗಿ ಬಿಡುಗಡೆ ಮಾಡಲು ಅಗತ್ಯವಿರುವ ಜಂಟಿ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:

ಗೋದಾವರಿ-ಕೃಷ್ಣಾ-ಕಾವೇರಿ ಮಹಾ ನದಿ ಜೋಡಣೆಗೆ ಚಾಲನೆ

ದಕ್ಷಿಣ ಭಾರತದ ಇಡೀ ಕೃಷಿ ವಲಯದ ಚಿತ್ರಣವನ್ನೇ ಬದಲಿಸಬಲ್ಲ ಬಹುನಿರೀಕ್ಷಿತ ‘ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ’ ಯೋಜನೆಯನ್ನು ವೇಗಗೊಳಿಸುವ ಕುರಿತು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಗಂಭೀರವಾಗಿ ಚರ್ಚಿಸಿದರು. ಗೋದಾವರಿ ಕೊಳ್ಳದ ಹೆಚ್ಚುವರಿ ಜಲರಾಶಿಯನ್ನು ಕೃಷ್ಣಾ ನದಿಯ ಮೂಲಕ ತಮಿಳುನಾಡಿನ ಕಾವೇರಿ ಕೊಳ್ಳಕ್ಕೆ ಹರಿಸುವ ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ನಾಯ್ಡು ಮತ್ತು ವಿಜಯ್ ಸಮ್ಮತಿಸಿದರು.

ಈ ಮಹತ್ವದ ಸಭೆಯಲ್ಲಿ ಆಂಧ್ರಪ್ರದೇಶದ ಪ್ರಮುಖ ಸಚಿವರಾದ ನಾರಾಯಣ, ನಿಮ್ಮಲ ರಾಮನಾಯ್ಡು ಹಾಗೂ ಸಂಸದ ಮಗುಂಟ ಶ್ರೀನಿವಾಸುಲು ರೆಡ್ಡಿ ಉಪಸ್ಥಿತರಿದ್ದರು. 

Must Read