ಸಂಸಾರದ ಮರುಬೆಸುಗೆಗೆ ವೇದಿಕೆಯಾಗುತ್ತಿರುವ ಲೋಕ ಅದಾಲತ್

-ನೆಲ್ಲಿಜೆ ನವ್ಯಜ್ಯೋತಿ

ರಾಜ್ಯದಲ್ಲಿ ಹೆಚ್ಚುತ್ತಿರುವ ದಾಂಪತ್ಯ ಕಲಹದ ಖಾಯಿಲೆಗೆ ಕೌಟುಂಬಿಕ ನ್ಯಾಯಾಲಯ ಮಾತ್ರವಲ್ಲದೇ ಕಾನೂನು ಸೇವೆಗಳ ಪ್ರಾಧಿಕಾರ ಟಾನಿಕ್ ಆಗಿ ಪರಿಣಮಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 150ಕ್ಕೂ ಅಧಿಕ ಜೋಡಿಗಳು ಮತ್ತೆ ಒಂದಾಗಿವೆ. ವಿಶೇಷವೆಂದ್ರೆ ಲೋಕ ಅದಾಲತ್‌ನಲ್ಲಿಯೇ ಮರು ಮದುವೆಯೂ ಆಗಿದ್ದಾರೆ.
ರಾಜ್ಯದ ವೈವಾಹಿಕ ವ್ಯಾಜ್ಯಗಳ ಅವಲೋಕನ ಮಾಡಿದರೆ, ಮೈಸೂರು ಜಿಲ್ಲೆಯ ಜನರು ಕುಟುಂಬ, ದಾಂಪತ್ಯ ಮೌಲ್ಯ ಹಾಗೂ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದಂತಿದೆ. ಪ್ರತೀ ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು, ಮತ್ತೆ ಒಂದಾಗುತ್ತಿರುವ ದಂಪತಿಗಳು ಇದಕ್ಕೆ ಜ್ವಲಂತ ಉದಾಹರಣೆಯಾಗಿದ್ದಾರೆ. ರಾಜ್ಯದ 150 ಜೋಡಿಗಳಲ್ಲಿ 100ಕ್ಕೂ ಮಿಕ್ಕಿ ಮೈಸೂರು ಜಿಲ್ಲೆಯವರಾಗಿರುವುದು ವಿಶೇಷ.

ಜಡ್ಜ್ ಮುಂದೆ ಮರುಮದುವೆಯಾದ ಜೋಡಿ:

ಕಳೆದ ವರ್ಷ ಮಾ.27ರಂದು ನಡೆದ ಲೋಕ ಅದಾಲತ್‌ನಲ್ಲಿ ಮೈಸೂರು ಜಿಲ್ಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ 29 ಜೋಡಿಗಳು ಸೌಹಾರ್ದಯುತವಾಗಿ ತಮ್ಮ ಪ್ರಕರಣಗಳನ್ನು ರಾಜೀ ಮಾಡಿಕೊಂಡಿದ್ದಾರೆ. ಅಲ್ಲದೇ ಅವರೆಲ್ಲರೂ ಮತ್ತೆ ಒಂದಾಗಿದ್ದಾರೆ. ಈ 29 ಜೋಡಿಗಳಲ್ಲಿ 67 ವರ್ಷ ಪ್ರಾಯದ ಪತಿ ಮತ್ತು 55ರ ಹರೆಯದ ಪತ್ನಿಯ ಜೋಡಿಯೂ ಇದೆ. ಇನ್ನೊಂದು ಪ್ರಕರಣದಲ್ಲಿ 70 ವರ್ಷ ವಯಸ್ಸಿನ ದಂಪತಿ ವಿಚ್ಛೇದನವಾಗಿ ಜೀವನ ನಿರ್ವಹಣೆಗಾಗಿ ದಾವೆ ಹೂಡಿದ್ದರು. ಈ ಜೋಡಿ ಲೋಕ ಅದಾಲತ್‌ನಲ್ಲಿ ಬಂದು ರಾಜಿಯಾಗಿ, ಅದಾಲತ್‌ನಲ್ಲಿ ನ್ಯಾಯಾಧೀಶರ ಮುಂದೆಯೇ ಮರುಮದುವೆಯಾಗಿ ಅಚ್ಚರಿ ಮೂಡಿಸಿದರು.

ಕಳೆದ ಅಕ್ಟೋಬರ್‌ನಲ್ಲಿ ನಡೆದ ಲೋಕ ಅದಾಲತ್ ಮುಂದೆ ದಾಂಪತ್ಯ ಕಲಹ, ವಿವಾಹ ವಿಚ್ಛೇದನದ 1528 ಪ್ರಕರಣಗಳಿದ್ದು, ಈ ಪೈಕಿ 37 ದಂಪತಿಗಳು ಮತ್ತೆ ಜೊತೆಯಾಗಿದ್ದಾರೆ. ಇದರಲ್ಲಿ 25 ದಂಪತಿಗಳು ಮೈಸೂರು ಜಿಲ್ಲೆಯವರು, ಗದಗದ 8 ಜೋಡಿಗಳು ಸೇರಿವೆ. ಮೂರು ತಿಂಗಳ ಹಿಂದೆ ಮಾ.12ರಂದು ನಡೆದ ಅದಾಲತ್‌ನಲ್ಲಿ 90 ಜೋಡಿಗಳು ಮತ್ತೆ ಒಂದಾಗಿದ್ದು, ಈ ಪೈಕಿ 45 ದಂಪತಿಗಳು ಮೈಸೂರು ಜಿಲ್ಲೆಯವರಾಗಿದ್ದು, ಇದನ್ನು ಪುಷ್ಟೀಕರಿಸುತ್ತಿದೆ.

ವಿಶೇಷವೆಂದರೆ, ಹಿಂದಿನ ಮೆಗಾ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಜೀವನ ನಿರ್ವಹಣೆ ಸೇರಿದಂತೆ ವೈವಾಹಿಕ ಕಲಹದ ನಾಲ್ಕು ಪ್ರಕರಣಗಳು ಇತ್ಯರ್ಥ ಕಂಡಿವೆ. ಈ ತಿಂಗಳ 25ರಂದು ರಾಜ್ಯಾದ್ಯಂತ ಮೆಗಾ ಅದಾಲತ್ ನಡೆಯಲಿದ್ದು, ದೂರ ಆಗಿರುವ ಇನ್ನಷ್ಟು ದಂಪತಿಗಳು ಮತ್ತೆ ಒಂದಾಗುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!