ಅಕ್ರಮ ಮರಳು ಸಾಗಾಟದ ಲಾರಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಹೊಸದಿಗಂತ ವರದಿ, ಮಡಿಕೇರಿ:
ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಹಿಟಾಚಿ ಯಂತ್ರ ಹಾಗೂ ಮರಳು ಸಾಗಾಟದ ಲಾರಿಯನ್ನು ಗ್ರಾಮಸ್ಥರೇ ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.
ನೆಲ್ಯಹುದಿಕೇರಿಯ ನಲ್ವತ್ತೆಕರೆ ಭಾಗದ ಕಾವೇರಿ ನದಿಯಿಂದ ರಾತ್ರಿವೇಳೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದ್ದು, ವಾಲ್ನೂರು- ತ್ಯಾಗತ್ತೂರು, ನೆಲ್ಯಹುದಿಕೇರಿ ಗ್ರಾಮಸ್ಥರು ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ಎರಡು ತಿಂಗಳಿನಿoದ ನಲ್ವತ್ತೆಕರೆ ಪ್ರದೇಶದಿಂದ ಕೆ.ಆರ್.ನಗರ ಮತ್ತಿತರೆಡೆಗೆ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ. ಮಾಲ್ದಾರೆ ಗೇಟ್’ನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರೂ, ನಿರಂತರವಾಗಿ ಮರಳು ದಂಧೆ ನಡೆಯುತ್ತಿದೆ. ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರೇ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾತ್ರಿ ವೇಳೆ ಮರಳು ಸಾಗಾಟವಾಗುತ್ತಿದ್ದು, ಲಾರಿಯನ್ನು ಮಾತ್ರ ವಶಕ್ಕೆ ಪಡೆದಿರುವ ಅಧಿಕಾರಿಗಳು ಹಿಟಾಚಿ ಯಂತ್ರ ಮತ್ತು ಅಕ್ರಮವಾಗಿ ಶೇಖರಣೆ ಮಾಡಿರುವ ಮರಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಧ್ಯ ರಾತ್ರಿಯಲ್ಲಿ ಅಕ್ರಮ ಮರಳುದಂಧೆ ನಡೆಯುತ್ತಿದ್ದು, ನೆಲ್ಯಹುದಿಕೇರಿಯ ವಿವಿಧ ಪ್ರದೇಶಗಳಲ್ಲಿ ಇದು ನಿರಂತರವಾಗಿದೆ. ನಿಯಮ ಬಾಹಿರ ಮರಳು ಗಣಿಗಾರಿಕೆಯ ಹಿಂದೆ ಮರಳು ಮಾಫಿಯಾ ಕೆಲಸ ಮಾಡುತ್ತಿರುವ ಸಂಶಯ ವ್ಯಕ್ತವಾಗಿದೆ.
ಅನಾಹುತ ಸಂಭವಿಸುವ ಮೊದಲು ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಮರಳುಗಾರಿಕೆಗೆ ಬಳಸಿದ ಹಿಟಾಚಿ ವಾಹನ ಸೇರಿದಂತೆ ಎಲ್ಲಾ ಯಂತ್ರಗಳನ್ನು ಮತ್ತು ಅಕ್ರಮವಾಗಿ ತೆಗೆದಿರುವ ಮರಳನ್ನು ವಶಕ್ಕೆ ಪಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!