ಲೋಕಸಭಾ ಚುನಾವಣೆ ಟಿಕೆಟ್: ವರಿಷ್ಠರ ತೀರ್ಮಾನಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಬದ್ಧ ಎಂದ ನಳಿನ್

ಹೊಸದಿಗಂತ ವರದಿ, ಮಂಗಳೂರು:

ಮುಂಬರುವ ಲೋಕಸಭೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ನೀಡುವುದು ರಾಷ್ಟ್ರೀಯ ನಾಯಕರ ತೀರ್ಮಾನ. ವರಿಷ್ಠರು ಏನೇ ತೀರ್ಮಾನ ಮಾಡಿದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಅದಕ್ಕೆ ಬದ್ಧ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಬಿಜೆಪಿ ಕಾರ್ಯಕರ್ತರಾಗಿ ಎಲ್ಲರೂ ಶ್ರಮಿಸುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಪುತ್ತಿಲ ಪರಿವಾರದಿಂದ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಸ್ಪರ್ಧೆ ಸಾಧ್ಯತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪುತ್ತಿಲ ಪರಿವಾರ ಒಂದು ಸ್ವತಂತ್ರ ಸಂಸ್ಥೆ. ಆ ಸಂಸ್ಥೆಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ. ಅವರ ಮನವೊಲಿಕೆಗೆ ಪಕ್ಷ ಪ್ರಯತ್ನ ಮಾಡಿದೆ. ಬಿಜೆಪಿ ಬಹಳ ವರ್ಷಗಳ ಹೋರಾಟದಿಂದ ಇದೀಗ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ್ನು ಎದುರಿಸಿ ಲೋಕಸಭೆಯಲ್ಲಿ ಅತಿ ಹೆಚ್ಚು ಸೀಟು ಗೆದ್ದಿದೆ. ಪಕ್ಷಕ್ಕೆ ಎದುರಾಳಿಯ ಪ್ರಶ್ನೆ ಇಲ್ಲ. ಇದು ಪ್ರಜಾಪ್ರಭುತ್ವ, ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ. ಪ್ರತಿ ಚುನಾವಣೆಗೆ ಬಂದಾಗ ಹತ್ತಾರು ಸಮಸ್ಯೆಗಳು ಉದ್ಭವವಾಗುತ್ತವೆ. ಆ ಎಲ್ಲ ಸವಾಲುಗಳನ್ನು ಬಿಜೆಪಿ ಗೆದ್ದು ಗೆಲುವು ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲೂ ಭಾರಿ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ರಾಮಮಂದಿರ ನಿರ್ಮಾಣದ ಬಳಿಕ ಬಿಜೆಪಿ ಪರ ವಾತವರಣ ಅದ್ಭುತವಾಗಿದೆ. ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ. ಹಿಂದುತ್ವ, ರಾಷ್ಟ್ರವಾದ, ಅಭಿವೃದ್ಧಿ ವಿಚಾರವಾಗಿ ಜನರು ಒಗ್ಗಟಾಗುತ್ತಾರೆ ಎಂದು ನಳಿನ್ ಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!