ಹೊಸದಿಗಂತ ವರದಿ ಹಾವೇರಿ:
ಗುಂಪು ವಿಮೆ ಮೊತ್ತದ (ಜಿ.ಐ.ಎಸ್) ಬಿಲ್ ಮಾಡಿಕೊಡಲು 3 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಹಾವೇರಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಎಫ್‌ಡಿಎ ಸಿಬ್ಬಂದಿ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಾವೇರಿಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಕ್ಕಮ್ಮ ಎನ್. ಬಿದರೇರ್ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕಿ.
2026 ಮೇ.31ರಂದು ವಯೋನಿವೃತ್ತಿ ಹೊಂದಿದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ನಿವೃತ್ತ ಎಫ್‌ಡಿಎ ಮಹದೇವ ಹನುಮಂತಪ್ಪ ಜೇಕಿನಕಟ್ಟಿ ಈ ಕುರಿತು ದೂರು ನೀಡಿದ್ದರು. ಜಿ.ಐ.ಎಸ್ ಬಿಲ್ ಮಾಡಿಕೊಡಲು ಆರೋಪಿತೆ 3 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟು, ಸೋಮವಾರ ಬೆಳಗ್ಗೆ ಹಾವೇರಿ ಜಿಲ್ಲಾಡಳಿತ ಭವನದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಹಣವನ್ನು ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ.
ಇದನ್ನೂ ಓದಿ:
ಆರೋಪಿತರನ್ನು ವಶಕ್ಕೆ ಪಡೆದು, ತನಿಖೆಯನ್ನು ಮುಂದುವರೆಸಿದ್ದಾರೆ. ದಾವಣಗೆರೆಯ ಕರ್ನಾಟಕ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ತನಿಖಾಧಿಕಾರಿಗಳಾದ ಲೋಕಾಯುಕ್ತ ಡಿವೈಎಸ್‌ಪಿ ಸಿ.ಮಧುಸೂದನ್ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



