ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಗೃಹ ಸಚಿವ ಅಮಿತ್ ಶಾ ಅವರು ಅಸಹ್ಯಕರ ಮತ್ತು ಅವಮಾನಕರ’ ಎಂದು ಕಟುವಾಗಿ ಟೀಕಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಖರ್ಗೆಯವರ ಹೇಳಿಕೆ ಪ್ರಧಾನಿ ಮೋದಿಯವರ ಬಗ್ಗೆ ಕಾಂಗ್ರೆಸ್ ಹೊಂದಿರುವ ದ್ವೇಷ ಮತ್ತು ಭಯವನ್ನು ತೋರಿಸುತ್ತದೆ. ಅವರು ತಮ್ಮ ಭಾಷಣದಲ್ಲಿ ಸಂಪೂರ್ಣವಾಗಿ ಅಸಹ್ಯಕರವಾಗಿ ಮಾತನಾಡುವ ಮೂಲಕ ತಮ್ಮ ನಾಯಕರು ಮತ್ತು ತಮ್ಮ ಪಕ್ಷವನ್ನು ಮೀರಿಸಿದ್ದಾರೆ. ಅನಗತ್ಯವಾಗಿ ತಮ್ಮ ವೈಯಕ್ತಿಕ ಆರೋಗ್ಯದ ವಿಷಯಗಳಿಗೆ ಪ್ರಧಾನಿ ಮೋದಿಯನ್ನು ಎಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಖರ್ಗೆ ಅವರ ಆರೋಗ್ಯಕ್ಕಾಗಿ, ಮೋದಿಯವರು, ನಾನು ಪ್ರಾರ್ಥಿಸುತ್ತೇವೆ. ಅವರು ಹಲವು ವರ್ಷಗಳ ಕಾಲ ಬದುಕಲಿ. 2047 ರ ವೇಳೆಗೆ ವಿಕಸಿತ ಭಾರತ ನಿರ್ಮಾಣವನ್ನು ನೋಡಲು ಅವರು ಬದುಕಲಿ ಎಂದು ಪೋಸ್ಟ್ ಮಾಡಿದ್ದಾರೆ.
ಭಾನುವಾರ ಜಮ್ಮು ಮತ್ತು ಕಾಶ್ಮೀರದ ಜಸ್ರೋಟಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದಾಗ ಖರ್ಗೆಯವರು ಕುಸಿದು ಬಿದ್ದಿದ್ದರು. ಬಳಿಕ ಮತ್ತೆ ತಮ್ಮ ಭಾಷಣವನ್ನು ಮುಂದುವರೆಸಿದ್ದರು. ಈ ವೇಳೆ ನನಗೆ 83 ವರ್ಷ, ನಾನು ಅಷ್ಟು ಬೇಗ ಸಾಯುವುದಿಲ್ಲ. ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ನಾನು ಬದುಕುತ್ತೇನೆ ಎಂದಿದ್ದರು.