“ವಿರಾಟ್ – ಸೂರ್ಯ ಆಟ ನೋಡಿ ಕಲಿಯಿರಿ”: ಪಾಕ್‌ ಬ್ಯಾಟ್ ಮನ್‌ ಗಳಿಗೆ ಮಾಜಿ ಕ್ರಿಕೆಟಿಗನ ಕಿವಿಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ಟಿ 20 ವಿಶ್ವಕಪ್‌ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಪಾಕಿಸ್ತಾನ ಈ ಬಾರಿ ಅತ್ಯಂತ ಹೀನಾಯ ಪ್ರದರ್ಶನ ತೋರಿದೆ. ಬದ್ಧವೈರಿ ಟೀಂ ಇಂಡಿಯಾ ಹಾಗೂ ಜಿಂಬಾಬ್ವೆ ವಿರುದ್ಧ ಎದುರಾದ ಅಘಾತಕಾರಿ ಸೋಲು ತಂಡವನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಈ ಬೆನ್ನಲ್ಲೇ ಹಲವಾರು ಮಾಜಿ ಕ್ರಿಕೆಟಿಗರು ಬಾಬರ್ ಅಜಮ್ ಅವರ ನಾಯಕತ್ವ ಮತ್ತು ಇತರ ಆಟಗಾರರ ಪ್ರದರ್ಶನವನ್ನು ಕಟುವಾಗಿ ಟೀಕಿಸುತ್ತಿದ್ದಾರೆ.  ಅದರಲ್ಲೂ ಪ್ರಮುಖವಾಗಿ ಪಾಕ್ ಮಾಜಿ ಬ್ಯಾಟ್ಸ್‌ಮನ್ ಸಲ್ಮಾನ್ ಬಟ್ ಜಿಂಬಾಬ್ವೆ ವಿರುದ್ಧ ಕಳಪೆ ಶಾಟ್ ಗಳನ್ನ ಆಯ್ಕೆ ಮಾಡಿಕೊಂಡ ಪಾಕಿಸ್ತಾನಿ ಬ್ಯಾಟರ್‌ಗಳನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ತಮ್ಮ ಯೂಟ್ಯೂಬ್‌ ಚಾನೆಲ್‌ ನಲ್ಲಿ ಮಾತನಾಡಿರುವ ಬಟ್‌, ಸರಿಯಾದ ಕ್ರಿಕೆಟ್ ಹೊಡೆತಗಳನ್ನು ಹೇಗೆ ಆಡಬೇಕೆಂದು ಪಾಕ್‌ ತಂಡ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್‌ ಅವರನ್ನು ನೋಡಿ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
ʼಈಗ ವಿಶ್ವಕ್ರಿಕೆಟ್‌ ಶ್ರೇಯಾಂಕ ಗಮನಿಸುವುದಾದರೆ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಐಸಿಸಿ ಟಿ 20 ಶ್ರೇಯಾಂಕದಲ್ಲಿ ಅಗ್ರ 2 ಬ್ಯಾಟರ್‌ಗಳಾಗಿದ್ದಾರೆ. ಅತ್ತ ಭಾರತದ ಕಡೆ ಸೂರ್ಯ ಹಾಗೂ ಕೊಹ್ಲಿ ಅಗ್ರ ಶ್ರೇಯಾಂಕಿತರಾಗಿದ್ದಾರೆ. ಈ ವಿಶ್ವಕಪ್‌ ನಲ್ಲಿ ಅವರಿಬ್ಬರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ಪಾಕ್‌ ಬ್ಯಾಟರ್‌ ಗಳು ಪದೇ ಪದೆ ವಿಫಲರಾಗುತ್ತಿದ್ದಾರೆ ಎಂದು ಸಲ್ಮಾನ್‌ ಬಟ್‌ ಟೀಕಿಸಿದ್ದಾರೆ.
“ನೀವು ಉನ್ನತ ಕೌಶಲ್ಯ ಹೊಂದಿರುವ ಬ್ಯಾಟ್ಸ್‌ ಮನ್‌ ನಿಂದ ಕಲಿಯಲು ಬಯಸಿದರೆ, ವಿರಾಟ್ ಕೊಹ್ಲಿಯ ಕಡೆಗೆ ನೋಡಿ. ಅವರು ಈವರೆಗೆ ಟೂರ್ನಿಯಲ್ಲಿ ಔಟಾಗಿಯೇ ಇಲ್ಲ. ಅವರು ನೆದರ್ಲ್ಯಾಂಡ್ಸ್ ವಿರುದ್ಧ SCG ನಲ್ಲಿ ಕವರ್‌ಗಳ ಮೇಲೆ ಹೊಡೆದ ಸಿಕ್ಸರ್ ಗಮನಿಸಿ. ದೊಡ್ಡ ಶಾಟ್‌ ಗಳನ್ನು ಹೊಡೆಯುವಲ್ಲಿ ಅವರ ಪ್ಲೇಸ್‌ ಮೆಂಟ್‌,  ಕೈಚಳಕ ಮತ್ತು ಆಟದ ಗುಣಮಟ್ಟವನ್ನು ನೋಡಿ. ಅವರು ಉನ್ನತ ಫಾರ್ಮ್ನಲ್ಲಿದ್ದರೂ ರನ್ ಗಳಿಸಲು ಯಾವುದೇ ಅನಗತ್ಯ ಉತ್ಸಾಹವನ್ನು ತೋರಿಸಲಿಲ್ಲ. ರೋಹಿತ್ ಶರ್ಮಾ ಕ್ರೀಸ್‌ ನಲ್ಲಿದ್ದಷ್ಟೂ ಸಮಯ ವಿರಾಟ್‌ ತಾನು ನೆಲೆಯೂರಲು ಸಮಯವನ್ನು ತೆಗೆದುಕೊಂಡರು. ರೋಹಿತ್‌ ಔಟ್‌ ಆದ ಬಳಿಕ ಆಕ್ರಮಣಕಾರಿಯಾದರು. ಸೆಟ್‌ ಆದ ಬಳಿಕ ಅತ್ಯುತ್ತಮವಾಗಿ ಕೆಲವು ಬೌಂಡರಿಗಳನ್ನು ಹೊಡೆದರು. ಜೊತೆಗೆ ಅರ್ಧಶತಕ ಗಳಿಸಿ ಅದ್ಭುತ ಇನ್ನಿಂಗ್ಸ್‌ ಕಟ್ಟಿದರು.
“ಒಬ್ಬ ಆಟಗಾರನು ಸಂವೇದನಾಶೀಲನಾಗಿದ್ದರೆ, ಆಟದ ಗತಿ ಅರಿತಿದ್ದರೆ ಆತ ವಿಶ್ವದ ಅಗ್ರ  ಬ್ಯಾಟ್ಸ್‌ ಮನ್‌ ಗಳಲ್ಲಿ ಒಬ್ಬನಾಗಿರುತ್ತಾನೆ. ಕೊಹ್ಲಿ ನಿಸ್ಸಂದೇಹವಾಗಿ ಅಂತಹ ಅದ್ಭುತ ಬ್ಯಾಟ್ಸ್‌ ಮನ್. ಹಿಂದಿನ ಪಂದ್ಯವನ್ನು ತಾನು ಗೆಲ್ಲಿಸಿದ್ದೇನೆ ಎಂಬ ವಿಚಾರವನ್ನು ಯೋಚಿಸದೆ ವಿರಾಟ್ ಸಂವೇದನಾಶೀಲವಾಗಿ ಬ್ಯಾಟಿಂಗ್ ಮಾಡಿದರು. ‌ಅವರು ವಿಶ್ವದ ನಂಬರ್ ಒನ್ ಬ್ಯಾಟ್ಸ್‌ ಮನ್. ‌ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿ ಪಂದ್ಯದ ಗೇರ್ ಬದಲಾಯಿಸಿದರು. ಡಚ್ ವಿರುದ್ಧ ಕೊಹ್ಲಿ ಮತ್ತು ಸೂರ್ಯ ಹೇಗೆ ಪಂದ್ಯವನ್ನು ತಮ್ಮಡೆಗೆ ವಾಲಿಸಿದರು ಹಾಗೂ ಅಪಾಯಕಾರಿ ಹೊಡೆತಗಳನ್ನು ಆಡದೆ ಸ್ಕೋರ್‌ಬೋರ್ಡ್ ಅನ್ನು ಹೇಗೆ ತಮ್ಮ ಪರವಾಗಿ ಇರಿಸಿಕೊಂಡರು ಎಂಬುದನ್ನು ನೋಡಿ ಕಲಿಯಿರಿ ಎಂದು ಪಾಕ್‌ ಬ್ಯಾಟ್ಸ್‌ ಮನ್‌ ಗಳಿಗೆ ಭಟ್‌ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!