ಶಾಂತಿ-ನೆಮ್ಮದಿ- ಸಹನೆಗೆ ಶ್ರೀಕೃಷ್ಣ ಆದರ್ಶಪ್ರಾಯ: ಕೆ.ಜಿ.ಬೋಪಯ್ಯ

ಹೊಸದಿಗಂತ ವರದಿ, ಮಡಿಕೇರಿ:
ಶ್ರೀಕೃಷ್ಣನಷ್ಟು ಸಮಗ್ರವಾಗಿ ಆವರಿಸಿಕೊಂಡಿರುವ ಅಲೌಕಿಕ ವಿವರ ಇನ್ನೊಂದಿರಲಾರದು. ಶಾಂತಿ, ನೆಮ್ಮದಿ, ಸಹನೆಗೆ ಶ್ರೀಕೃಷ್ಣ ಆದರ್ಶಪ್ರಾಯ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀಕಂಚಿ ಕಾಮಾಕ್ಷಮ್ಮ ದೇವಾಲಯದ ಆವರಣದಲ್ಲಿ ಶನಿವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಪಾತ್ರ ಪ್ರಮುಖವಾಗಿದೆ. ಶ್ರೀಕೃಷ್ಣನು ಹಲವು ಅವತಾರಗಳ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಅವರು ತಿಳಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಪನ್ಯಾಸ ನೀಡಿದ ಚಿ.ನಾ.ಸೋಮೇಶ್ ಅವರು, ಶ್ರೀಕೃಷ್ಣ ಗೋಪಾಲಕರಾಗಿದ್ದು, ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿದುಕೊಳ್ಳುವಂತಾಗಬೇಕು. ಅನೇಕ ಪವಾಡಗಳು ಮತ್ತು ಲೀಲೆಗಳಿಂದ ದೈವೀಪುರುಷನಾಗಿ ಶ್ರೀಕೃಷ್ಣನ್ನು ಸ್ಮರಿಸಲಾಗುತ್ತದೆ. ದುಷ್ಟರ ಶಿಕ್ಷಕ, ಶಿಷ್ಟರ ರಕ್ಷಕ ಹೀಗೆ ನಾನಾ ಅವತಾರಗಳಿಂದ ಜನಮಾನಸದಲ್ಲಿ ಉಳಿದಿರುವ ಶ್ರೀಕೃಷ್ಣನ ನಾಮದ ಅರ್ಥಗಳು ಹಲವು. ಶ್ರೀಕೃಷ್ಣ ಸ್ಮರಣೆಯಿಂದ ಸಂತಸ, ಸಡಗರ, ಹರ್ಷ ಉಲ್ಲಾಸ ಉಂಟಾಗುತ್ತದೆ ಎಂದರು.
ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ರವಿಕುಮಾರ್, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯದಲ್ಲಿ ಸಮಿತಿ ಅವರು ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮಡಿಕೆ ಒಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಗರಸಭಾ ಸದಸ್ಯರಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ , ಶ್ವೇತಾ ಮತ್ತಿತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರೆ, ಜಯಲಕ್ಷ್ಮಿ ನಿರೂಪಿಸಿದರು. ರಘುರಾಮ್ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!