ಹೊಸದಿಗಂತ ವರದಿ,ಮಡಿಕೇರಿ:
ಲಾರಿಯೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ 4 ಕಾರುಗಳು, ದ್ವಿಚಕ್ರ ವಾಹನಗಳಿಗೆ ಹಾಗೂ ಬಟ್ಟೆ ಅಂಗಡಿಗೆ ಹಾನಿ ಉಂಟಾದ ಘಟನೆ ಸುರತ್ಕಲ್ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಇಲ್ಲಿನ ಪೆಟ್ರೋಲ್ ಬಂಕ್ ರಸ್ತೆ ಬಳಿ ಸಂಜೆ ಐದೂವರೆ ವೇಳೆ ಈ ಘಟನೆ ಸಂಭವಿಸಿದ್ದು, ಚಾಲಕ ಲಾರಿಯನ್ನು ನಿಲ್ಲಿಸಿ ಹೊರಗೆ ತೆರಳಿದ್ದನು. ಈ ವೇಳೆ ಏಕಾಏಕಿ ಹಿಂದಕ್ಕೆ ಚಲಿಸಿದ ಲೋಡ್ ಲಾರಿ ಇಲ್ಲಿನ ಡಿವೈಡರ್ ಬಳಿ ತಿರುವು ತೆಗೆದು ಕೊಂಡು ಬಂದಿದ್ದು, ಇದರಿಂದ ಮಾರ್ಕೆಟ್ ಅಂಗಡಿಗೆ ಬಂದಿದ್ದ ಗ್ರಾಹಕರ ನಾಲ್ಕು ಕಾರುಗಳಿಗೆ ಗುದ್ದಿತಲ್ಲದೆ ಎಳೆದುಕೊಂಡು ಮತ್ತಷ್ಟು ಚಲಿಸಿ, ಬಳಿಕ ಅಂಗಡಿಯ ಗೋಡೆಗೆ ತಾಗಿ ನಿಂತಿತು.
ಇತ್ತ ಮಾರ್ಕೆಟ್ ಬಳಿಯೂ ಸಾಕಷ್ಟು ಜನವಿದ್ದು,ದೂರದಿಂದಲೇ ಲಾರಿ ಹಿಮ್ಮುಖವಾಗಿ ಚಲಿಸುವುದನ್ನು ಕಂಡು ಬದಿಗೆ ಸರಿದು ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರು ಉತ್ತರ ಟ್ರಾಫಿಕ್ ವಿಭಾಗದ ಪೊಲೀಸರು ಆಗಮಿಸಿ ಸಂಚಾರ ವ್ಯವಸ್ಥೆ ಸುಗಮಕ್ಕೆ ಸಹಕರಿಸಿದರು.