-ವಿಘ್ನೇಶ್ವರ ಗುನಗಾ, ಅಂಕೋಲಾ
ತಾಜ್‌ಮಹಲ್‌ನ್ನು ಮೊಘಲ್ ಬಾದಶಹ ಶಹ ಜಹಾನ ಮತ್ತು ಆತನ ರಾಣಿ ಮಮ್ತಾಜ್‌ಳ ಅಮರ ಪ್ರೇಮದ ಸಂಕೇತವೆಂದೇ ಪರಿಗಣಿಸಲಾಗುತ್ತದೆ. “ಮಮ್ತಾಜ್‌ಳ ಮರಣಾನಂತರ ಆಕೆಯ ನೆನಪಿನಲ್ಲಿಯೇ ಕೊರಗಿ, ಕೊರಗಿ ಕೊನೆಗೆ ಮಗ ಔರಂಗಜೇಬನಿಂದ ಸೆರೆಮನೆಗೆ ದೂಡಲ್ಪಟ್ಟು ಅಲ್ಲಿಯೇ ಆತ ಮರಣವನ್ನು ಹೊದಿದ. ಅಲ್ಲಿಯೂ ಸೆರೆಮನೆಯ ಕಿಟಕಿಯಿಂದ ತಾಜ್‌ಮಹಲ್‌ನ್ನೇ ದಿಟ್ಟಿಸಿ ಕಣ್ಣೀರಿಡುತ್ತಿದ್ದ” ಎಂದೇ ಇತಿಹಾಸಕಾರರು ವರ್ಣಿಸುತ್ತಾರೆ.
ನಿಜವಾಗಿಯೂ ಷಹಾ ಜಹಾನ್ ಮಮ್ತಾಜ್ ಮಹಲ್‌ಳನ್ನು ಅಷ್ಟೆಲ್ಲಾ ಪ್ರೀತಿಸುತ್ತಿದ್ದನೇ? ಮಮ್ತಾಜ್‌ಳ ಮರಣಾನಂತರ ಆತ ನಿಜಕ್ಕೂ ಬಾಹ್ಯ ಪ್ರಪಂಚದ ಆಸೆಯನ್ನೇ ಕಳೆದುಕೊಂಡಿದ್ದನೇ? ತಾಜ್‌ಮಹಲ್ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವ ಅಮರ ಪ್ರೇಮಿಗಳೇ, ಇಲ್ಲಿವೆ ಮೊಘಲ್ ಬಾದಶಹರ ಇತಿಹಾಸ ಮತ್ತು ಅವರ ಅಂತಃಪುರದ ಕರಾಳ ಸತ್ಯಗಳು.
ಭಾರತದ ಇತಿಹಾಸವನ್ನೇ ಬದಲಿಸಿತ್ತು ಆ ಯುದ್ಧ:
ಅದು ಕ್ರಿ.ಶ. 1526ರ ಸಮಯ. ಮೂರು ತಲೆಮಾರುಗಳಿಂದ ಉತ್ತರ ಭಾರತವನ್ನು ಆಳುತ್ತಿದ್ದ ಲೋಧಿ ಮನೆತನದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಆರಂಭವಾಗಿತ್ತು. ಇಬ್ರಾಹಿಮ್ ಲೋಧಿಯು ದಿಲ್ಲಿಯ ಗದ್ದುಗೆಯಲ್ಲಿ ಆಸೀನನಾಗಿದ್ದರೆ, ಆತನನ್ನು ಕೆಳಗಿಳಿಸಲು ಆತನ ಚಿಕ್ಕಪ್ಪ ಮತ್ತು ಸಹೋದರ, ಉಜ್ಬೇಕಿಸ್ತಾನದಲ್ಲಿದ್ದ ಬಾಬರನ ಸಹಾಯ ಕೇಳಿದ್ದರು.
ಇದರಿಂದ ಉತ್ತೇಜಿತನಾಗಿ, ಭಾರತ ಪ್ರವೇಶಿಸಿದ್ದ ಬಾಬರ ಮತ್ತು ಇಬ್ರಾಹಿಮ್ ಲೋಧಿಯ ಸೈನ್ಯ ಮುಖಾಮುಖಿಯಾಗಿದ್ದು, ಪಾಣಿಪತ್‌ನಲ್ಲಿ. ಇಬ್ಬರು ಮುಸ್ಲಿಂ ದೊರೆಗಳು ದಿಲ್ಲಿಯ ಸಿಂಹಾಸನಕ್ಕಾಗಿ ನಡೆಸಿದ ಯುದ್ಧವದು. ಇತಿಹಾಸಕಾರರ ಪ್ರಕಾರ, ಬಾಬರನ ಸೈನ್ಯದಲ್ಲಿ 13,000 ಸೈನಿಕರಿದ್ದರೆ, ಇಬ್ರಾಹಿಮ್ ಲೋಧಿಯ ಸೈನ್ಯದಲ್ಲಿ 1 ಲಕ್ಷ ಸೈನಿಕರಿದ್ದರು. ಅಲ್ಲದೇ ಬಾಬರನ ಹತ್ತಿರ ಇಲ್ಲದ ಗಜಪಡೆಯ ದೊಡ್ಡ ತುಕಡಿಯೇ ಇಬ್ರಾಹಿಮ್ ಲೋಧಿಯ ಸೈನ್ಯದಲ್ಲಿತ್ತು. ಇಷ್ಟೆಲ್ಲಾ ಮೇಲುಗೈ ಇದ್ದರೂ ಬಾಬರನಿಗೆ ಯುದ್ಧ ಗೆಲ್ಲುವ ಸಂಪೂರ್ಣ ವಿಶ್ವಾಸವಿತ್ತು. ಆ ವಿಶ್ವಾಸಕ್ಕೆ ಕಾರಣವೇ ಆತನ ಸೈನ್ಯದಲ್ಲಿದ್ದ ಫಿರಂಗಿಗಳು. ಬಾಬರನಿಗೆ ಇನ್ನೊಮ್ಮೆ ಅವಕಾಶ ನೀಡದೆ ಸದೆಬಡಿಯುವ ಉದ್ದೇಶದಿಂದ ಲೋಧಿ ತನ್ನ ಸಂಪೂರ್ಣ ಸೈನ್ಯವನ್ನು ಯುದ್ಧಕ್ಕೆ ಇಳಿಸಿದ್ದ. ಲೋಧಿಯ ಸೈನ್ಯದ ಮುಂಭಾಗದಲ್ಲಿ ಗಜಪಡೆ ಇರುವುದನ್ನು ಕಂಡ ಬಾಬರ, ತನ್ನ ಸೈನ್ಯದಲ್ಲಿದ್ದ ಎಲ್ಲಾ ತೋಪುಗಳನ್ನು ಒಮ್ಮೆಲೇ ಚಲಾಯಿಸಲು ಆದೇಶ ನೀಡಿದ್ದ. ಫಿರಂಗಿಗಳ ಘರ್ಜನೆ ಮತ್ತು ಬೆಂಕಿಯಿಂದ ಹೆದರಿದ ಆನೆಗಳು ಒಮ್ಮೆಲೇ ಘೀಳಿಡುತ್ತಾ, ತನ್ನದೇ ಸೈನಿಕರ ಮೇಲೆಯೇ ಆಕ್ರಮಣ ಮಾಡಲಾರಂಭಿಸಿದ್ದವು. ಲೋಧಿಯ ಸೈನಿಕರೆಲ್ಲ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಆಗ ಬಾಬರ ನಡೆಸಿದ ಯುದ್ಧದಲ್ಲಿ ಇಬ್ರಾಹಿಮ್ ಲೋಧಿಯು ಕೊಲ್ಲಲ್ಪಟ್ಟ.
ಚಿಕ್ಕಪ್ಪನ ಮಗಳನ್ನೇ ಮದುವೆಯಾಗಿದ್ದ ಅಕ್ಬರ
ಇಬ್ರಾಹಿಮ್ ಲೋಧಿಯನ್ನು ಸೋಲಿಸಿದ ಬಾಬರ, ಆತನ ತಾಯಿಯನ್ನು ಕಾರಾಗೃಹದಲ್ಲಿಟ್ಟು ದಿಲ್ಲಿಯ ಸುಲ್ತಾನನಾಗಿ ರಾಜ್ಯವಾಳಲಾರಂಭಿಸಿದ. ಹೀಗೆ, ಆರಂಭಗೊಂಡ ಮೊಘಲ್ ಆಳ್ವಿಕೆಯಲ್ಲಿ ಭಾರತದ ಇತಿಹಾಸ, ಯುದ್ಧದಿಂದ-ಅಂತ:ಪುರದವರೆಗೆ, ಕ್ರೌರ್ಯದಿಂದ-ಪ್ರೇಮದವರೆಗೆ ಹಿಂದೆಂದೂ ಕಂಡರಿಯದ ಘಟನೆಗಳಿಗೆ ಸಾಕ್ಷಿಯಾಯಿತು.
ಬಾಬರ್ ತನ್ನ ಜೀವನದ ಹೆಚ್ಚಿನ ಸಮಯವನ್ನು ಯುದ್ಧಗಳಲ್ಲಿಯೇ ಕಳೆದರೆ, ಆತನ ಮಗ ಹುಮಾಯೂನ ಹೆಚ್ಚಿನ ಕಾಲ ರಾಜ್ಯವಾಳಲ್ಲಿಲ್ಲ. ಅಕ್ಬರ ಸ್ವಂತ ಚಿಕ್ಕಪ್ಪನಾದ ಹಿಂಡಲ್ ಮಿರ್ಜಾನ ಮಗಳು ರಖೈಲಾ ಬೇಗಮ್‌ನನ್ನು ಮದುವೆಯಾಗಿದ್ದ. ಆತನಿಗೆ 300ಕ್ಕೂ ಹೆಚ್ಚು ರಾಣಿಯರಿದ್ದರು. ಲವ್ ಜೆಹಾದ್‌ನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದ ಅಕ್ಬರ, 12 ಜನ ರಜಪೂತ ರಾಜಕುಮಾರಿಯರನ್ನು ಮದುವೆಯಾಗಿ ಅವರನ್ನೆಲ್ಲ ಮತಾಂತರಿಸಿದ್ದ.
ಅಕ್ಬರನ ಹರಮ್‌ನಲ್ಲಿದ್ದು 5000 ರಾಣಿಯರು
ಮೊಘಲ್ ಚಕ್ರವರ್ತಿಗಳು ಯುದ್ಧದಲ್ಲಿ ಗೆದ್ದ ರಾಜ್ಯದ ರಾಣಿಯರು, ರಾಜಕುಮಾರಿಯರು ಮತ್ತು ಸುಂದರ ಯುವತಿಯರನ್ನು ಬಂಧಿಯನ್ನಾಗಿಸಿ, ಅವರನ್ನು ಒಂದು ಪ್ರತ್ಯೇಕ ಜಾಗೆಯಲ್ಲಿ ಇಡಲಾಗುತ್ತಿತ್ತು. ಆ ಜಾಗೆಯನ್ನು “ಹರಮ್” ಎಂದು ಕರೆಯಲಾಗುತ್ತಿತ್ತು. ಹರಮ್‌ಗೆ ಬಾದಶಹಾನನ್ನು ಹೊರತುಪಡಿಸಿ ಅನ್ಯ ಪುರುಷರು ಪ್ರವೇಶಿಸುವಂತಿರಲಿಲ್ಲ. ಅಂದರೆ, ಕೇವಲ ಬಾದಶಹನಿಗೇ ಮೀಸಲಾದ ಹೆಣ್ಣುಗಳು. ಅವರನ್ನು ಕಾಯಲು ಮೊಘಲರು ಹಿಜಡಾಗಳನ್ನು ನಿಯಮಿಸುತ್ತಿದ್ದರು. ಹೀಗೆ, ಅಕ್ಬರನ ಹರಮ್‌ನಲ್ಲಿ 5000 ರಾಣಿಯರಿದ್ದರೆ, ಅನಾರ್ಕಲಿಯ ಪ್ರೇಮಿಯೆಂದೇ ಪ್ರಸಿದ್ಧನಾದ ಸಲೀಂ(ಜಹಂಗೀರ)ನ ಹರಮ್‌ನಲ್ಲಿ 3000 ರಾಣಿಯರಿದ್ದರು.
20ನೇ ಹೆಂಡತಿಯಾಗಿದ್ದ ಜಹಂಗೀರನ ಪ್ರೇಮಿ ನೂರ್‌ಜಹಾನ್:
ಅಕ್ಬರ್ ಯುದ್ಧ ಮತ್ತು ರಜಪೂತರೊಡನೆ ಮದುವೆಯ ಸಂಬಂಧದ ಮೂಲಕ ಮೊಘಲ್ ಸಾಮ್ರಾಜ್ಯವನ್ನು ವಿಸ್ತರಿಸಿದನು. ಆತನಿಗೆ ಮರಿಯಂ ಉಝ್ ಜಮಾನಿ(ಜೋಧಾಬಾಯಿ)ಯಲ್ಲಿ ಹುಟ್ಟಿದ ಮಗನೇ ಸಲೀಮ್. ಆತನೇ ಅಕ್ಬರನ ನಂತರ ಸಿಂಹಾಸನವನ್ನೇರಿ ಜಹಂಗೀರನೆಂದು ಪ್ರಸಿದ್ದನಾದವ. ಸಿಂಹಾಸನವನ್ನೇರಿದ ಕೂಡಲೇ, ಆತ ಬಾಲ್ಯದಿಂದ ಪ್ರೀತಿಸುತ್ತಿದ್ದ ಎನ್ನಲಾದ ಮೆಹರುನ್ನಿಸ್ಸಾಳ ಗಂಡ ಶೇರ ಅಫ್ಗನ್‌ನನ್ನು ಕೊಲ್ಲಿಸಿ, ಆಕೆಯನ್ನು ಮದುವೆಯಾದ. ಮೆಹರುನ್ನಿಸ್ಸಾಳನ್ನು ನೂರ್‌ಜಹಾನ್ ಎಂದು ಹೆಸರಿಸಿದ. ಮದುವೆಯಾಗಿ ಐದು ವರ್ಷಗಳ ಕಾಲ ಬಾಳ್ವೆ ನಡೆಸಿದ್ದ ನೂರ್‌ಜಹಾನ್‌ಳ ಗಂಡನನ್ನು ಕೊಂದು ಆಕೆಯನ್ನು ಮದುವೆಯಾದಾಗುವ ಮುಂಚೆ, ಜಹಂಗೀರ 19 ಸ್ತ್ರೀಯರನ್ನು ಮದುವೆಯಾಗಿದ್ದ.
ಅನಾರ್ಕಲಿಯನ್ನು ಜೀವಂತ ಸಮಾಧಿ ಮಾಡಿದ್ದ ಅಕ್ಬರ್..!
“ಸಲೀಂ-ಅನಾರ್ಕಲಿ” ಇದೇ ಜಹಂಗೀರನ ಇನ್ನೊಂದು ಪ್ರೇಮ ಕತೆ. ಅಬ್ದುಲ್ ಲತೀಫ್ ತನ್ನ ತಾರೀಖ-ಇ-ಲಾಹೋರನಲ್ಲಿ “ಜಹಂಗೀರನ ಪ್ರೇಮಕ್ಕಾಗಿಯೇ ಅನಾರ್ಕಲಿ ಮೃತಪಟ್ಟಳು” ಎಂದು ಹೇಳಿದ್ದರೆ, 1608ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವಿಲಿಯಮ್ ಫ್ಲಿಂಚ್ “ನಾದಿರಾ ಬೇಗಂ, ಇರಾನ್‌ನಿಂದ ಬಂದ ನೃತ್ಯಗಾರ್ತಿ. ಆಕೆಗೆ ಅನಾರ್ಕಲಿ ಎಂದು ಹೆಸರಿಸಿದ್ದು ಅಕ್ಬರ. ಅಕ್ಬರನ ಅನೇಕ ಹೆಂಡತಿಯರಲ್ಲಿ ಅನಾರ್ಕಲಿಯೂ ಒಬ್ಬಳು. ಅಕ್ಬರನಿಗೆ ಆಕೆಯಲ್ಲಿ ದಾನಿಯಾ ಶಹಾ ಎಂಬ ಮಗನಿದ್ದ. ಸಲೀಮ್(ಜಹಂಗೀರ) ಅಕ್ಬರನಿಗೆ ಜೋಧಾಬಾಯಿಯಲ್ಲಿ ಜನಿಸಿದ ಮಗನಾಗಿದ್ದ. ಸಲೀಂ ತನ್ನ ತಾಯಿಯ ಸಮನಾದ ಅನಾರ್ಕಲಿಯನ್ನೇ ಪ್ರೀತಿಸುತ್ತಿದ್ದ. ಇದನ್ನು ತಿಳಿದ ಅಕ್ಬರ, ಅನಾರ್ಕಲಿಯನ್ನು ಲಾಹೋರನ ಕೋಟೆಯ ಗೋಡೆಯಲ್ಲಿ ಜೀವಂತವಾಗಿ ಸಮಾಧಿ ಮಾಡಿಸಿದ.” ಎಂದೇ ಬರೆಯುತ್ತಾನೆ.
ಮಗನ ಕಣ್ಣುಗಳನ್ನೇ ಕೀಳಿಸಿದ್ದ ಜಹಾಂಗೀರ:
ಅಕ್ಬರನ ತರುವಾಯು ದಿಲ್ಲಿಯ ಗದ್ದುಗೆ ಏರಿದ ಜಹಾಂಗೀರ, ತನ್ನ ವಿರುದ್ಧ ಬಂಡೆದ್ದ ತನ್ನ ಹಿರಿಯ ಮಗ ಖುಸ್ರೊ ಮಿರ್ಜಾನನ್ನು ಭೈರೋವಾಲ ಯುದ್ಧದಲ್ಲಿ ಸೆರೆ ಹಿಡಿದು ಆತನ ಕಣ್ಣಗಳನ್ನು ಕಾಯಿಸಿದ ಕಬ್ಬಿಣದ ಸರಿಗೆಯಿಂದ ಕುರುಡನನ್ನಾಗಿಸಿ ಅಗ್ರಾದ ಸೆರೆಮನೆಗೆ ತಳ್ಳಿದ. ನಂತರ ತನ್ನ ಪ್ರೀತಿಯ ಪುತ್ರ ಖುರ್ರಂ(ಷಹ ಜಹಾನ್)ನ ಮಾತು ಕೇಳಿ ಆತನನ್ನು ಸೆರೆಮನೆಯಲ್ಲಿಯೇ ಕೊಲ್ಲಿಸಿದ್ದ.
ಷಹ ಜಹಾನ್ ಮತ್ತು ಮಮ್ತಾಜ್‌ಳ ಅಮರ ಪ್ರೀತಿ:
ಹೀಗೆ, ಅಣ್ಣನನ್ನು ಕೊಲ್ಲಿಸಿ ಮೊಘಲ್ ಸಿಂಹಾಸನವನ್ನೇರಿದ ಷಹಾ ಜಹಾನ್‌ನ ಹೆಂಡತಿಯೇ ಮಮ್ತಾಜ್ ಮಹಲ್. ಮಮ್ತಾಜ್ ಆತನ ಎರಡನೇ ಹೆಂಡತಿಯಾಗಿದ್ದು, ಆಕೆ ಜೀವಿಸಿರುವಾಗಲೇ ಷಹ ಜಹಾನ್ ಮತ್ತೆ ನಾಲ್ವರನ್ನು ಮದುವೆಯಾಗಿದ್ದ. ಮಮ್ತಾಜ್ 1631ರಲ್ಲಿ 14ನೇ ಮಗು ರೋಶನಾರಾಳಿಗೆ ಜನ್ಮ ನೀಡುತ್ತಿರುವಾಗ ಆದ ರಕ್ತ ಸ್ರಾವದಲ್ಲಿ ಮರಣಪಟ್ಟಳು. ತನ್ನ 19 ವರ್ಷಗಳ ದಾಂಪತ್ಯ ಜೀವನದಲ್ಲಿ ಹೆಚ್ಚು-ಕಡಿಮೆ ವರ್ಷಕ್ಕೆ ಒಂದರಂತೆ ಒಟ್ಟು 14 ಮಕ್ಕಳಿಗೆ ಜನ್ಮ ನೀಡಿದ ಮಮ್ತಾಜ್‌ಳನ್ನು ಷಹ ಜಹಾನ್ ಯಾವ ಪರಿಯಲ್ಲಿ ಪ್ರೀತಿಸಿರಬೇಡ?
“ಷಹ ಜಹಾನ್, ಮಮ್ತಾಜ್‌ಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಮಮ್ತಾಜ್‌ಳ ಸಾವಿನ ನಂತರ ಆತ ದರ್ಬಾರಿಗೆ ಹೋಗುವುದನ್ನು ತ್ಯಜಿಸಿದ್ದ. ಯಾವಾಗಲೂ ಅಳುತ್ತಲೇ ಕುಳಿತುಕೊಳ್ಳುತ್ತಿದ್ದ. ತಾರುಣ್ಯದಲ್ಲಿದ್ದ ಬಾದಶಹಾನ ಗಡ್ಡ-ಮೀಸೆಗಳೆಲ್ಲ ಕೆಲವೇ ದಿನಗಳಲ್ಲಿ ಬೆಳ್ಳಗಾಗಿ ಆತ ಮುದುಕನಂತೆ ಕಾಣುತ್ತಿದ್ದ. ಮಗ ಔರಂಗಜೇಬನಿಂದ ಸೆರೆಮನೆಗೆ ದೂಡಲ್ಪಟ್ಟ ನಂತರವೂ ಶಹಾ ಜಹಾನ ಸೆರೆಮನೆಯ ಕಿಟಕಿಯಿಂದ ತಾಜ್‌ಮಹಲ್‌ನ್ನೇ ದಿಟ್ಟಿಸಿ ಕಣ್ಣೀರಿಡುತ್ತಿದ್ದ” ಎಂದೇ ಮೊಘಲ್ ಇತಿಹಾಸಕಾರರು ಬರೆಯುತ್ತಾರೆ.
ಮಮ್ತಾಜ್‌ಳನ್ನೇ ಹೋಲುತ್ತಿದ್ದ ಆಕೆಯ ಮಗಳು ಜಹನಾರಾ:
ಆದರೆ ಅನೇಕ ಇತಿಹಾಸಕಾರರು ಇದಕ್ಕೆ ಸಹಮತಿ ತೋರಿಸುವುದಿಲ್ಲ. ಅವರ ಪ್ರಕಾರ ಷಹ ಜಹಾನ್ ಮಮ್ತಾಜ್‌ಳ ಸಾವಿನ ನಂತರ ತನ್ನ ಮಗಳಾದ ಜಹನಾರಾಳಲ್ಲಿ ಅನುರಕ್ತನಾಗಿದ್ದ. ಜಹನಾರಾ, ಮಮ್ತಾಜ್‌ಳ ಬದುಕುಳಿದ ಏಳು ಮಕ್ಕಳಲ್ಲಿ ಹಿರಿಯವಳು. ಮಮ್ತಾಜ್‌ಳನ್ನೇ ಹೋಲುತ್ತಿದ್ದ ಜಹನಾರಾ ತಾಯಿಯ ಸಾವಿನ ಸಮಯದಲ್ಲಿ 17ರ ತರುಣಿ. ಮಮ್ತಾಜ್‌ಳ ಸಾವಿನಿಂದ ಕಂಗೆಟ್ಟಿದ್ದ ಷಹ ಜಹಾನ್‌ನನ್ನು ಸಂತೈಸುತ್ತಿದ್ದ ಜಹನಾರಾಳನ್ನೇ ಆತ ಮಮ್ತಾಜ್‌ಳಂದು ಭ್ರಮಿಸಿ ವರ್ತಿಸುತ್ತಿದ್ದ. ಇದೇ ಕಾರಣಕ್ಕಾಗಿಯೇ ಆತ ಜಹನಾರಾಳ ಮದುವೆಯನ್ನು ಮಾಡಲಿಲ್ಲ ಎಂದೂ ಕೆಲವು ಇತಿಹಾಸಕಾರರು ಆರೋಪಿಸುತ್ತಾರೆ.
ನಂಬಲಸಾಧ್ಯವಾದ ಅಪ್ಪ-ಮಗಳ ಸಂಬಂಧ:
ಫ್ರಾನ್ಸ್‌ನಿಂದ ಭಾರತಕ್ಕೆ ಆಗಮಿಸಿದ ಬರ್ನಿಯರ್ 8 ವರ್ಷಗಳ ಕಾಲ ಷಹ ಜಹಾನ್‌ನ ದರ್ಬಾರನಲ್ಲಿ ವೈದ್ಯನಾಗಿದ್ದ. ಆಸ್ಥಾನದ ಒಳ-ಹೊರಹುಗಳನ್ನೆಲ್ಲ ತಿಳಿದಿದ್ದ ಬರ್ನಿಯರ್ ತನ್ನ “ಟ್ರಾವೆಲ್ಸ್ ಇನ್ ದ ಮೊಘಲ್ ಎಂಪೈರ್” ಎಂಬ ಪುಸ್ತಕದಲ್ಲಿ “ಬೇಗಮ್ ಸಾಹಿಬಾ(ಜಹನಾರಾ) ಅಪೂರ್ವ ಸೌಂದರ್ಯದ ಗಣಿಯಾಗಿದ್ದಳು. ತಂದೆಯೊಂದಿಗಿನ ಆಕೆಯ ಸಂಬಂಧ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅವರಿಬ್ಬರ ಬಾಂಧವ್ಯ ಯಾವ ಸ್ಥಿತಿಯನ್ನು ತಲುಪಿತ್ತೆಂದರೆ, ಅದನ್ನು ನಂಬುವುದು ಅಸಾಧ್ಯವಾಗಿತ್ತು. ಈ ಸಂಬಂಧದ ಸರ್ಮಥನೆಯನ್ನು ಷಹ ಜಹಾನ ಧರ್ಮಗುರು(ಮೌಲ್ವಿ)ಗಳ ಮೇಲೆ ಬಿಟ್ಟಿದ್ದ. ತಾನೇ ನೆಟ್ಟ ಗಿಡದ ಹಣ್ಣನ್ನು ತಿನ್ನುವ ಎಲ್ಲ ಸ್ವಾತಂತ್ರ್ಯ ಬಾದಶಹನಿಗೆ ಇದೆ ಎಂದು ಮೌಲ್ವಿಗಳು ಸಮಜಾಯಿಸಿ ನೀಡುತ್ತಿದ್ದರು. ಷಹ ಜಹಾನ್ ಸದಾ ತನ್ನ ಮಗಳ ಮೇಲೆ ಕಣ್ಣಿಟ್ಟಿರುತ್ತಿದ್ದ. ಸ್ನಾನದ ಕೋಣೆಯಲ್ಲಿ ಆಕೆ ಪ್ರಿಯಕರನೊಂದಿಗೆ ಇರುವುದನ್ನು ತಿಳಿದ ಷಹ ಜಹಾನ್ ಆತನನ್ನು ಬಿಸಿ ನೀರಿನ ಹಂಡೆಯಲ್ಲಿಯೇ ಕೊಲ್ಲಿಸಿದ್ದ. ಆಕೆಯನ್ನು ಮದುವೆಯಾಗಲು ಆಗಮಿಸಿದ್ದ ಇನ್ನೊಬ್ಬ ಯುವಕನಿಗೆ ಷಹ ಜಹಾನ್ ತನ್ನ ಆಸ್ಥಾನದಲ್ಲಿಯೇ ವಿಷಪೂರಿತ ತಾಂಬೂಲ ನೀಡಿದ್ದ” ಎಂದೇ ಬರೆಯುತ್ತಾನೆ.
ಮಗಳನ್ನೇ ತನ್ನ ಕಾಮಕ್ಕೆ ಬಳಸಿಕೊಂಡವ ಅಮರ ಪ್ರೇಮಿಯೇ..? ಸಿಂಹಾಸನಕ್ಕಾಗಿ ಔರಂಗಜೇಬ್ ಮತ್ತು ಆತನ ಅಣ್ಣ ದಾರಾನ ನಡುವೆ ನಡೆದ ಅಂತ:ಹಕಲಹವನ್ನು ಎಳೆ-ಎಳೆಯಾಗಿ ಬಿಚ್ಚಿಡುವ ಬರ್ನಿಯರ್, ಔರಂಗಜೇಬ ತನ್ನ ಅಣ್ಣನ ತಲೆ ಕಡಿದು ಅದನ್ನು ಷಹ ಜಹಾನನಿಗೆ ಕಾಣಿಕೆಯಾಗಿ ಕಳುಹಿಸಿದ್ದ ಎಂದೇ ಬರೆಯುತ್ತಾನೆ. ಹೀಗೆ, ಅಣ್ಣನ ತಲೆಯನ್ನೇ ಕಡಿದು ತಂದೆಗೆ ಕಾಣಿಕೆ ಕೊಟ್ಟ, ಮಗನ ಕಣ್ಣುಗಳನ್ನೇ ಕೀಳಿಸಿದ ರಾಜರ ಆಸ್ಥಾನದಲ್ಲಿದ್ದ ಇತಿಹಾಸಕಾರರು ಎಷ್ಟು ನಿರ್ಭೀತರಾಗಿ ಇತಿಹಾಸವನ್ನು ಬರೆಯಲು ಸಾಧ್ಯ. ಹಾಗೆ ಬರೆಯಲ್ಪಟ್ಟ ಇತಿಹಾಸವನ್ನೇ ನಂಬಿ, ಹಿಂದೂ ರಾಜಕುಮಾರಿಯರನ್ನು ಮದುವೆಯಾಗಿ ಅವರನ್ನೆಲ್ಲ ಮತಾಂತರಿಸಿದವನನ್ನು ಧರ್ಮಸಹಿಷ್ಣು ಎಂದೂ, ಮಡದಿಯ ಸಾವಿನ ನಂತರ ಮಗಳನ್ನೇ ತನ್ನ ಕಾಮಕ್ಕೆ ಬಳಸಿಕೊಂಡವನನ್ನು ಅಮರಪ್ರೇಮಿ ಎಂದೂ ಕೊಂಡಾಡುವುದರಲ್ಲಿ ಏನಾದರೂ ಅರ್ಥವಿದೆಯೇ ? ಒಮ್ಮೆ ಯೊಚಿಸಿ..