ಕೀಳುಮಟ್ಟದ ಭಾಷೆ ಪ್ರಯೋಗ ಸಿದ್ಧರಾಮಯ್ಯನವರಿಗೆ ಶೋಭೆ ತರುವದಿಲ್ಲ: ಸಚಿವ ಸಿ.ಸಿ.ಪಾಟೀಲ್

ಹೊಸದಿಗಂತ ವರದಿ, ಗದಗ:

ಕೀಳುಮಟ್ಟದ ಭಾಷೆ ಪ್ರಯೋಗ ಸಿದ್ಧರಾಮಯ್ಯನವರಿಗೆ ಶೋಭೆ ತರುವದಿಲ್ಲ, ನಮ್ಮ ಹತ್ತಿರವೂ ಬೇಕಾದಂತಹ ಶಬ್ದ ಭಂಡಾರ ಇದೆ ಪದ-ಪುಂಕಗಳಿವೆ ಆದರೆ, ಸಂಸ್ಕೃತಿ, ಸಂಘಟನೆ ಹೊಂದಿರುವ ನಮ್ಮ ಪಕ್ಷ ಅಂತಹದ್ದನ್ನು ಕಲಿಸಿಕೊಟ್ಟಿಲ್ಲ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ. ನಾವೆಲ್ಲ ಚುನಾಯಿತ ಪ್ರತಿನಿಧಿಗಳು, ಜನರು ನಮ್ಮನ್ನು ಗಮನಿಸುತ್ತಿರುತ್ತಾರೆ ಯಾವ ಭಾಷೆ ಉಪಯೋಗ ಮಾಡಬೇಕೆಂದು ಸಿದ್ಧರಾಮಯ್ಯ ಕಲಿತುಕೊಳ್ಳಬೇಕು. ಅಲ್ಲದೆ, ಡಿ.ಕೆ.ಶಿವಕುಮಾರ ಅವರು ಮಾತನಾಡಿದ ಪದ ಪ್ರಯೋಗ ಬಹಳ ಅಶ್ಲೀಲವಾದದ್ದು ಇವರು ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಎನ್ನುವದನ್ನು ಮರೆಯಬಾರದು. ಅವರು ಕೀಳುಮಟ್ಟದ ಶಬ್ದ ಪ್ರಯೋಗ ನಿಲ್ಲಿಸಲಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಚುನಾವಣೆ ನಿಮಿತ್ತ ಯೋಜನೆ ಘೋಷಣೆ ಕುರಿತು ಮಾತನಾಡಿದ ಸಚಿವರು ಏಳೆಂಟು ಬಜೆಟ್‌ಗಳನ್ನು ಮಂಡಿಸಿದ ಅನುಭವ ಇರುವ ಸಿದ್ದರಾಮಯ್ಯ ಅವರು ಘೋಷಣೆ ಈಡೇರಿಸಲಿಕ್ಕೆ ಎಷ್ಟು ದುಡ್ಡು ಬೇಕೆಂದು ಲೆಕ್ಕ ಹಾಕಿ ಹೇಳಲಿ, ಕರ್ನಾಟಕದ ರೆವ್ಯಿನ್ಯೂ ಇನ್‌ಕಮ್ ಲೆಕ್ಕ ಹಾಕಿ ಹೇಳಲಿ, ನಮ್ಮದು ಅಬ್ಬಬ್ಬಾ ಎಂದರೆ ಎರಡುವರೆ ಲಕ್ಷಕೋಟಿ ಬಜೆಟ್ ಇದೆ. ಇವರು ಘೋಷಣೆ ಮಾಡಿರುವ ಕೆಲಸಗಳಿಗೆ ಎಷ್ಟು ಹಣ ಬೇಕೆಂದು ಲೆಕ್ಕ ಹಾಕಲಿ, ಅತೀ ಹೆಚ್ಚಿನ ಸಾಲ ಮಾಡಿ ಇಟ್ಟು ಹೋದ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಸಿದ್ಧರಾಮಯ್ಯರಿಗಿದೆ. ಸ್ವತಃ ಡಿ.ಕೆ.ಶಿಯವರೇ ಸಿದ್ಧರಾಮಯ್ಯರನ್ನು ನಾವು ಘೋಷಣೆ ಮಾಡಿದ್ದನ್ನು ಈಡೇರಿಸಲಿಕ್ಕೆ ಆಗುತ್ತಾ ಎಂದು ಕೇಳುತ್ತಿದ್ದಾರೆ. ಅವರೊಳಗೆ ವಿಶ್ವಾಸ ಇಲ್ಲದಂತಾಗಿದೆ. ದ್ವಂದ್ವ, ಗೊಂದಲದಲ್ಲಿ ಕಾಂಗ್ರೆಸ್ ಪಕ್ಷವಿದೆ. ಆದರೆ, ನಾವು ಅಖಂಡತ್ವದಿಂದ ಮುಂದಿನ ಚುನಾವಣೆಯನ್ನ ಎದುರಿಸಲಿದ್ದೇವೆ. ಸಂಪೂರ್ಣ ಬಹುಮತದಿಂದ ಮುಂದಿನ ಅಗಸ್ಟ ೧೫ ರ ಧ್ವಜಾರೋಹಣ ನಾವೇ ಮಾಡಲಿದ್ದೆವೆ ಎಂದು ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!