ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧನ ಪತ್ನಿ ಭಾರತೀಯ ಸೇನೆಗೆ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ನಲ್ಲಿ ಕಳೆದ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ನಂತರ 151 ಕೆಡೆಟ್‌ಗಳು, 35 ಮಹಿಳಾ ಕೆಡೆಟ್‌ಗಳು ಸೇರಿದಂತೆ ಒಟ್ಟು 186 ಅಧಿಕಾರಿಗಳು ಭಾರತೀಯ ಸೇನೆಗೆ ಸೇರ್ಪಡೆಗೊಂಡರು. ಈ ವೇಳೆ 36 ವಿದೇಶಿ ಕೆಡೆಟ್‌ಗಳು ಸಹ ಸೇನೆ ಸೇರ್ಪಡೆಯಾಗಿದ್ದಾರೆ.
ತಮ್ಮ ಕರ್ತವ್ಯದ ಸಮಯದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದ ಮೇಜರ್ ಕೆಪಿಎಸ್ ಕಹ್ಲೋನ್  ಅವರ ಪತ್ನಿ ಲೆಫ್ಟಿನೆಂಟ್ ಹರ್ವೀನ್ ಕೌರ್ ಅವರು ಪತಿಯ ಸಾವಿನ ಬಳಿಕ ತಾವೂ ದೇಶಸೇವೆಯಲ್ಲಿ ತೊಡಗುವ ದಿಟ್ಟ ನಿರ್ಧಾರ ಕೈಗೊಂಡು ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಕಠಿಣ ತರಬೇತಿ ಪಡೆದು ಸೇನಾಪಡೆಗೆ ಆಯ್ಕೆಯಾಗಿದ್ದಾರೆ.
ಮೇಜರ್ ಕೆಪಿಎಸ್ ಕಹ್ಲೋನ್ ಅವರು 129 ಎಸ್ಎಟಿಎ ರೆಜಿಮೆಂಟ್‌ನ ಫಿರಂಗಿ ಅಧಿಕಾರಿಯಾಗಿದ್ದರು. 2019 ರಲ್ಲಿ ಪತಿ ಮೇಜರ್ ಕೆಪಿಎಸ್ ಕಹ್ಲೋನ್ ಅವರು ನಿಧನರಾದಾಗ ಹರ್ವೀನ್‌ ಕೌರ್‌ ಕುಸಿದು ಹೋಗಿದ್ದರು. ಆ ವೇಳೆ ದೇಶಕ್ಕಾಗಿ ಪ್ರಾಣಕೊಟ್ಟ ಧೀರ ಪತಿಯ ಹೆಜ್ಜೆಗಳನ್ನು ಅನುಸರಿಸಲು ನಿರ್ಧರಿಸಿದರು.

11 ತಿಂಗಳ ಕಠಿಣ ತರಬೇತಿಯ ನಂತರ ಕೌರ್ ಅವರು ಭಾರತೀಯ ಸೇನೆಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹರ್ಲೀನ್ ಕಹ್ಲೋನ್ ಅವರ ಮಗ ಅನ್ಹದ್ಬೀರ್ ಸಿಂಗ್ ಅವರು ತಮ್ಮ ತಾಯಿ ಭಾರತೀಯ ಸೇನೆ ಸೇರುವುದನ್ನು ನೋಡಲು ಚೆನ್ನೈನಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಬಂದಿದ್ದರು. ಈ ವೇಳೆ ಮಾಡಲಾದ ವಿಡಿಯೋದಲ್ಲಿ, ಹರ್ವೀನ್‌ ಕೌರ್‌ ʼದಿವಂಗತ ಪತಿ ತನ್ನ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಹೇಳುವುದನ್ನು ಕೇಳಬಹುದು. ‘ರಾಷ್ಟ್ರ ಸೇವೆ ಅಥವಾ ಮಾತೃತ್ವ’ ಇವೆರಡರಲ್ಲಿ ನಿಮ್ಮ ಮೊದಲ ಆಯ್ಕೆ ಯಾವುದು ಎಂದು ಕೇಳಿದಾಗ, ಲೆಫ್ಟಿನೆಂಟ್ ಹರ್ವೀನ್ ಅವರು ತನಗೆ ರಾಷ್ಟ್ರವೇ ಎಲ್ಲದಕ್ಕಿಂತ ಮೊದಲು ಎಂದು ಉತ್ತರಿಸುವುದನ್ನು ಕೇಳಬಹುದು. ನನ್ನ ಮಗನಿಗಿಂತ ದೇಶವೇ ನನಗೆ ಹೆಚ್ಚಿನದು ಎಂದು ಕೌರ್‌ ಉತ್ತರಿಸಿದರು.

ಪಾಸಿಂಗ್ ಔಟ್ ಪರೇಡ್ ಅನ್ನು ರಾಯಲ್ ಭೂತಾನ್ ಆರ್ಮಿ ಚೀಫ್ ಆಪರೇಷನ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಬಟೂ ಶೆರಿಂಗ್ ಅವರು ಪರಿಶೀಲಿಸಿದರು. ಅವರು ಅಕಾಡೆಮಿಯ ಕೆಡೆಟ್‌ಗಳನ್ನು ಶ್ಲಾಘಿಸಿದರು ಮತ್ತು ನಿಸ್ವಾರ್ಥ ಸೇವೆಯ ಮಿಲಿಟರಿ ಮೌಲ್ಯಗಳಿಗೆ ಬದ್ಧರಾಗಿರಲು ಮತ್ತು ಅವರ ಪ್ರಯತ್ನಗಳಲ್ಲಿ ಶ್ರೇಷ್ಠತೆಗಾಗಿ ಶ್ರಮಿಸುವಂತೆ ಅವರನ್ನು ಉತ್ತೇಜಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!