May 16, 2026
Saturday, May 16, 2026
spot_img

CSK ಪ್ಲೇಆಫ್‌ ಕನಸಿಗೆ ಲಕ್ನೋ ಶಾಕ್: ಧೋನಿ ತಂಡದ ಭವಿಷ್ಯ ಈಗ RCB ಕೈಯಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ 7 ವಿಕೆಟ್‌ಗಳ ಆಘಾತಕಾರಿ ಸೋಲು ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಹಾದಿಯನ್ನು ದುರ್ಗಮಗೊಳಿಸಿದೆ. ಪ್ರಸ್ತುತ ಸಿಎಸ್‌ಕೆ ತಂಡ 12 ಪಂದ್ಯಗಳಲ್ಲಿ ತಲಾ 6 ಗೆಲುವು ಮತ್ತು ಸೋಲುಗಳೊಂದಿಗೆ ಒಟ್ಟು 12 ಅಂಕಗಳನ್ನು ಗಳಿಸಿ, +0.027 ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ.

ಲೀಗ್ ಹಂತದಲ್ಲಿ ಚೆನ್ನೈ ತಂಡಕ್ಕೆ ಇನ್ನು ಕೇವಲ ಎರಡು ಪಂದ್ಯಗಳು ಬಾಕಿ ಇವೆ. ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿರಲು ಸಿಎಸ್‌ಕೆಗೆ ಈ ಎರಡೂ ಪಂದ್ಯಗಳ ಗೆಲುವು ಅನಿವಾರ್ಯ. ಮುಂಬರುವ ಪಂದ್ಯಗಳಲ್ಲಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳನ್ನು ಚೆನ್ನೈ ಎದುರಿಸಲಿದ್ದು, ಇವೆರಡನ್ನೂ ಗೆದ್ದರೆ ತಂಡದ ಒಟ್ಟು ಅಂಕಗಳು 16ಕ್ಕೆ ಏರಲಿವೆ.

ಚೆನ್ನೈ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೂ ಪ್ಲೇಆಫ್ ಸ್ಥಾನ ಖಚಿತವಾಗುವುದಿಲ್ಲ. ಏಕೆಂದರೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಿಗೂ ಇನ್ನು ತಲಾ ಎರಡು ಪಂದ್ಯಗಳು ಬಾಕಿ ಇವೆ. ಒಂದು ವೇಳೆ ಈ ಎರಡೂ ತಂಡಗಳು ತಮ್ಮ ಮುಂಬರುವ ಪಂದ್ಯಗಳನ್ನು ಗೆದ್ದರೆ, ಕ್ರಮವಾಗಿ 18 ಮತ್ತು 17 ಅಂಕಗಳನ್ನು ಪಡೆದು ಸಿಎಸ್‌ಕೆಯನ್ನು ಹಿಂದಿಕ್ಕಲಿವೆ.

ಸಿಎಸ್‌ಕೆ ತಂಡವು ಟಾಪ್‌-4 ಹಂತಕ್ಕೇರಬೇಕಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವನ್ನು ಅವಲಂಬಿಸಬೇಕಾಗಿದೆ. ಸದ್ಯ ಎಸ್‌ಆರ್‌ಹೆಚ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಮ್ಮ ಮುಂದಿನ ಪಂದ್ಯಗಳನ್ನು ಆರ್‌ಸಿಬಿ ವಿರುದ್ಧ ಆಡಲಿವೆ. ಈ ಎರಡೂ ಪಂದ್ಯಗಳಲ್ಲಿ ಬೆಂಗಳೂರು ತಂಡ ಜಯಭೇರಿ ಬಾರಿಸಿದರೆ ಚೆನ್ನೈನ ಪ್ಲೇಆಫ್ ಹಾದಿ ಸುಲಭವಾಗಲಿದೆ.

ಆರ್‌ಸಿಬಿ ವಿರುದ್ಧ ಎಸ್‌ಆರ್‌ಹೆಚ್ ಸೋತು, ನಂತರದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧವೂ ಸೋತರೆ ಹೈದರಾಬಾದ್ 14 ಅಂಕಗಳಿಗೆ ಸೀಮಿತವಾಗಲಿದೆ. ಆಗ ಚೆನ್ನೈ 16 ಅಂಕಗಳೊಂದಿಗೆ ಸುಲಭವಾಗಿ ಪ್ಲೇಆಫ್‌ ಪ್ರವೇಶಿಸಬಹುದು.

ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೆ, ಪಂಜಾಬ್ ತನ್ನ ಕೊನೆಯ ಪಂದ್ಯ ಗೆದ್ದರೂ ಗರಿಷ್ಠ 15 ಅಂಕಗಳನ್ನಷ್ಟೇ ಪಡೆಯಲು ಸಾಧ್ಯ. ಇದರಿಂದ 16 ಅಂಕ ಹೊಂದಲಿರುವ ಸಿಎಸ್‌ಕೆಗೆ ಟಾಪ್-4 ತಲುಪಲು ಯಾವುದೇ ಅಡ್ಡಿ ಇರುವುದಿಲ್ಲ.

ಸದ್ಯದ ಐಪಿಎಲ್ ಲೆಕ್ಕಾಚಾರಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಭವಿಷ್ಯ ಪರೋಕ್ಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಕೈಯಲ್ಲಿದೆ ಎನ್ನಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !