ಗ್ರೀನ್‌ಲ್ಯಾಂಡ್‌ನಲ್ಲಿ ಸಿಕ್ಕಿಬಿದ್ದ 206 ಪ್ರಯಾಣಿಕರನ್ನು ಹೊತ್ತ ಐಷಾರಾಮಿ ಕ್ರೂಸ್ ಹಡಗು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

206 ಪ್ರಯಾಣಿಕರನ್ನು ಹೊತ್ತ ಐಷಾರಾಮಿ ಕ್ರೂಸ್ ಹಡಗು ಗ್ರೀನ್‌ಲ್ಯಾಂಡ್‌ನ ದೂರದ ಪ್ರದೇಶದಲ್ಲಿ ಸಿಲುಕಿಕೊಂಡಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿರುವುದಾಗಿ ಕ್ರೂಸ್ ಹಡಗು ನಿರ್ವಾಹಕರು ತಿಳಿಸಿದ್ದಾರೆ. ಸೆಪ್ಟೆಂಬರ್ 1 ರಂದು ಪ್ರಯಾಣ ಬೆಳೆಸಿದ ಹಡಗು ಮೂರು ವಾರಗಳ ಬಳಿಕ ಸೆಪ್ಟೆಂಬರ್ 22ರ ವೇಳೆಗೆ ತನ್ನ ಪ್ರಯಾಣದ ಅಂತಿಮ ಗುರಿಯನ್ನು ತಲುಪಬೇಕಿತ್ತು.

ಈ ಕ್ರೂಸ್ ಹಡಗು ಸೋಮವಾರ ಮಧ್ಯಾಹ್ನ ಗ್ರೀನ್‌ಲ್ಯಾಂಡ್ ರಾಜಧಾನಿ ನೌಕ್‌ನಿಂದ ಹೊರಟು ಸುಮಾರು 850 ಮೈಲುಗಳಷ್ಟು ದೂರ ಕ್ರಮಿಸಿ ಈಶಾನ್ಯ ಗ್ರೀನ್‌ಲ್ಯಾಂಡ್‌ನ ಆಲ್ಪೆಫ್‌ಜೋರ್ಡ್‌ನ ಎಕ್ಸ್‌ಪ್ಲೋರರ್‌ನಲ್ಲಿ ಸಿಲುಕಿಕೊಂಡಿದೆ ಎಂದು ಡೆನ್ಮಾರ್ಕ್‌ನ ಜಂಟಿ ಆರ್ಕ್ಟಿಕ್ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.

ಸಮುದ್ರದ ಉಬ್ಬರವಿಳಿತದಿಂದಾಗಿ ಹಡಗು ಇಲ್ಲಿಯವರೆಗೆ ಮುಂದೆ ಸಾಗಲು ಸಾಧ್ಯವಾಗಿಲ್ಲ. ಹಡಗಿನಲ್ಲಿದ್ದ ಯಾರಿಗೂ ತಕ್ಷಣದ ಅಪಾಯವಿಲ್ಲ ಮತ್ತು ಹಡಗಿನಲ್ಲಿ ಸಾಕಷ್ಟು ಸರಬರಾಜುಗಳಿವೆ ಎಂದು ಹಡಗಿನ ನಿರ್ವಾಹಕರಾದ ಅರೋರಾ ಎಕ್ಸ್‌ಪೆಡಿಶನ್ಸ್ ಹೇಳಿದರು. ಹವಾಮಾನವು ತುಂಬಾ ಪ್ರತಿಕೂಲವಾಗಿದ್ದು, ಸಹಾಯ ಕೇಂದ್ರಗಳು ಬಹಳ ದೂರದಲ್ಲಿರುವುದಾಗಿ ಆತಂಕ ಹೊರಹಾಕಿದರು. ಅಲ್ಲಿನ ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಡ್ಯಾನಿಶ್ ಮಿಲಿಟರಿಯ ಜಂಟಿ ಆರ್ಕ್ಟಿಕ್ ಕಮಾಂಡ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!