ಹೊಸದಿಗಂತ ವರದಿ ಚಿತ್ರದುರ್ಗ:
ಮೈ.ಚ.ಜಯದೇವ ಅವರು ಒಬ್ಬ ಸಂತನಂತೆ ಬದುಕಿದ್ದರು. ಓರ್ವ ಸ್ವಯಂ ಸೇವಕ ಹೇಗೆ ಬದುಕಬೇಕೆಂಬ ಮಾದರಿ ಹಾಕಿಕೊಟ್ಟವರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಬಣ್ಣಿಸಿದರು.
ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಹಾಗೂ ರಾಷ್ಟ್ರೋತ್ಥಾನ ಬಳಗ ಚಿತ್ರದುರ್ಗ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಎಲ್ಲರೂ ಜ್ಯೇಷ್ಠರಾಗಬಹುದು. ಆದರೆ ಶ್ರೇಷ್ಠರಾಗುವುದು ಮುಖ್ಯ. ಇಂತಹ ಅನೇಕರು ಸಂಘದಲ್ಲಿ ಬಂದು ಹೋಗಿದ್ದಾರೆ. ಆದರೆ ಇಂತಹ ಯಾವುದೇ ವ್ಯಕ್ತಿಗಳ ಜೀವಿತಾವಧಿಯಲ್ಲಿ ಪುಸ್ತಕಗಳನ್ನು ತರಲಿಲ್ಲ. ಅವರ ಜೀವಿತದ ಅಂತ್ಯದ ನಂತರ ಪುಸ್ತಕಗಳನ್ನು ಹೊರತರಲಾಗಿದೆ. ಇಂತಹ ವಿಶಿಷ್ಟ ವ್ಯಕ್ತಿಗಳ ಶ್ರೇಷ್ಠ ಚಿಂತನೆಗಳನ್ನು ದಾಖಲು ಮಾಡಿ ಜನರಿಗೆ ತಿಳಿಸಬೇಕೆಂಬುದು ಇದರ ಉದ್ದೇಶ. ಅದರಂತೆ ಮೈ.ಚ.ಜಯದೇವ ಅವರ ವ್ಯಕ್ತಿತ್ವವನ್ನು ಪುಸ್ತಕ ರೂಪದಲ್ಲಿ ಅನಾವರಣ ಮಾಡಲಾಗಿದೆ ಎಂದರು.
ಅತ್ಯಂತ ಚಿಕ್ಕ ವಯಸ್ಸಿನಲೇ ಸಂಘಕ್ಕೆ ತಮ್ಮನ್ನು ಅರ್ಪಿಸಿಕೊಂಡ ಅವರು, ತಮ್ಮ ಜೀವನವನ್ನು ಅನನ್ಯತೆಯ ಕಡೆಗೆ ಕೊಂಡೊಯ್ದರು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ರಾಷ್ಟ್ರೋತ್ಥಾನ ಪರಿಷತ್ನ ಕೊಡುಗೆ ಅಪಾರ. ಇಂತಹ ಕೆಲಸವನ್ನು ಮೈ.ಚ.ಜಯದೇವ ಅವರು ಮಾಡಿದರು. ದೇಶ ವಿಭಜನೆಯ ಕಥೆ, ವಂದೇ ಮಾತರಂ ಕಥೆ-ವ್ಯಥೆಯ ಬಗ್ಗೆ ಧ್ವನಿ ಸುರುಳಿಗಳನ್ನು ಹೊರ ತಂದರು. ವೀರ ಸಾವರ್ಕರ್ ಕುರಿತ ’ಆತ್ಮಾಹುತಿʼ, ಚಂದ್ರಶೇಖರ್ ಆಜಾದ್ ಕುರಿತ ’ಅಜೇಯʼ ಎಂಬ ಕೃತಿಗಳನ್ನು ಬರೆಸಿದರು. ಆ ಮೂಲಕ ಅನೇಕ ಲೇಖಕರುಗಳಿಗೆ ಉತ್ತಮ ಪುಸ್ತಕಗಳನ್ನು ಬರೆಯಲು ಪ್ರೇರೇಪಿಸಿದರು ಎಂದು ಸ್ಮರಿಸಿದರು.
ಆರ್ಎಸ್ಎಸ್ ಕೇವಲ ಒಂದು ಸಂಸ್ಥೆಯಾಗಿ ಉಳಿಯಬಾರದು ಎಂಬ ಕಾರಣಕ್ಕೆ ಸದಸ್ಯತ್ವ ಪದ್ಧತಿ ತರಲಿಲ್ಲ. ಇಲ್ಲಿ ಯಾವುದೇ ವ್ಯಕ್ತಿ ಪೂಜೆ ಇಲ್ಲ. ಅದರಂತೆ ಯಾವುದೇ ವ್ಯಕ್ತಿ ನಿಂದೆ ಇಲ್ಲ. ’ಭಾರತ್ ಮಾತಾಕಿ ಜೈ’ ಎಂಬುದೊಂದೇ ಇಲ್ಲಿ ಮಂತ್ರವಾಕ್ಯ. ಹಾಗಾಗಿ ಸಂಘವನ್ನು ಹೊರಗಿನಿಂದ ನೋಡಿವರಿಗೆ ಅರ್ಥವಾಗುವುದಿಲ್ಲ. ಒಳಗೆ ಬಂದು ಮುಕ್ತ ಮನಸ್ಸಿನಿಂದ ನೋಡಿದಾಗ ಅನೇಕ ವೈಶಿಷ್ಟ್ಯಗಳು ಕಾಣುತ್ತವೆ. ಇಲ್ಲಿ ಅನೇಕ ಸ್ವಯಂ ಸೇವಕರು ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಾರೆ. ಅಂಥವರಲ್ಲಿ ಮೈ.ಚ.ರಾಮಣ್ಣ ಅವರೂ ಒಬ್ಬರಾಗಿದ್ದು, ಅವರು ಬುದ್ಧಿ, ಸಂಘಟನಾ ಕೌಶಲ್ಯ ಹೊಂದಿದವರಾಗಿದ್ದರು ಎಂದು ಹೇಳಿದರು.
ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮದಾರ ಚೆನ್ನಯ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಮೈ.ಚ.ಜಯದೇವ ಅವರು ಸತ್ಯ ನಿಷ್ಠೆ, ವಸ್ತು ನಿಷ್ಠೆ ಹೊಂದಿದವರಾಗಿದ್ದರು. ಕೇವಲ 10ನೇ ವಯಸ್ಸಿನಲ್ಲೇ ರಾಷ್ಟ್ರೀಯತೆ ಗುಣ, ಸನಾತನ ಧರ್ಮದ ಚಿಂತನೆ ಅಳವಡಿಸಿಕೊಂಡಿದ್ದರು. ಅವರ ಪ್ರೇರಣೆಯಿಂದ 2005 ರಲ್ಲಿ ಮೈಸೂರಿನ ಬ್ರಾಹ್ಮಣರ ಕೇರಿಯಲ್ಲಿ ಸಾಮರಸ್ಯ ಪಾದಯಾತ್ರೆ ನಡೆಯಿತು. ಅದರಲ್ಲಿ ಭಾಗಿಯಾಗಿದ್ದ ನಮಗೆ ಅತ್ಯಂತ ಗೌರವ ದೊರೆಯಿತು. ಆ ಮೂಲಕ ಅವರು ಸಾಮರಸ್ಯದ ಉಗಮಕ್ಕೆ ಕಾರಣರಾದರು ಎಂದು ಸ್ಮರಿಸಿದರು.
ಇದನ್ನೂ ಓದಿ:
ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಕಟ್ಟದಲ್ಲಿ ಅವರೊಂದಿಗೆ ಸಮಯ ಕಳೆಯುವ ಸದಾವಕಾಸ ನನ್ನ ಪಾಳಿಗೆ ದೊರಕಿತ್ತು. ಅವರು ನಮ್ಮ ಜೊತೆ ಅನೇಕ ಸೂಕ್ಷ್ಮ ಚಿಂತನೆಗಳನ್ನು ಹಂಚಿಕೊಂಡಿದ್ದರು. ಸುತ್ತೂರು ಮಠದ ದೇಶೀಕೇಂದ್ರ ಸ್ವಾಮೀಜಿಯವರು ಮೈ.ಚ.ಜಯದೇವ ಅವರನ್ನು ’ಶ್ವೇತ ವಸ್ತ್ರಧಾರಿ ಸಂತ’ ಎಂದು ಕರೆಯುತ್ತಿದ್ದರು. ಶೋಷಿತ ದಲಿತ ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿಯಬೇಕೆಂಬ ಮಹದಾಸೆ ಅವರಲ್ಲಿತ್ತು. ಇಂತಹ ಮಹತ್ವದ ಕಾರ್ಯಕ್ಕೆ ಶ್ರಮಿಸಿದ ಅವರಿಗೆ ಅವರೇ ಸಾಟಿ ಎಂದರು.
ಪ್ರಶಿಕ್ಷಣ ಭಾರತಿ ಬಳ್ಳಾರಿ ವಿಭಾಗದ ಸಂಚಾಲಕ ಆರ್.ಕೊಟ್ರಪ್ಪ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮೈ.ಚ.ಜಯದೇವ ಅವರ ಬದುಕು-ನೆನಪು ಕುರಿತ ’ಅವಿಶ್ರಾಂತ ಧ್ಯೇಯಜೀವಿ’ ಹಾಗೂ ಎಸ್.ಆರ್.ರಾಮಸ್ವಾಮಿ ಅವರ ಪರಾಮರ್ಶ ಪ್ರಬಂಧಗಳ ’ಇತಿಹಾಸದ ಸೆರಗುʼ ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ರಾಮಕಿರಣ್ ಸ್ವಾಗತಿಸಿದರು. ರಾಜೀವಲೋಚನ ಪ್ರಾಸ್ತಾವಿಕವಾಗಿ ಮಾತನಾಡಿದರು.



