ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲು ಸಜ್ಜಾಗಿವೆ. ವಾಣಿಜ್ಯನಗರಿ ಮುಂಬೈಯಲ್ಲಿ ಈ ರೀತಿಯ ಡಬಲ್ ಡೆಕ್ಕರ್ ಬಸ್‌ಗಳು ಸಂಚರಿಸುವುದನ್ನು ನೀವು ನೋಡಿರಬಹುದು. 1980ರ ಸಮಯದಲ್ಲಿ ಬೆಂಗಳೂರಿನಲ್ಲಿಯೂ ಇವು ಸಂಚರಿಸುತ್ತಿದ್ದವು ಆದರೆ ನಂತರದಲ್ಲಿ ಇವುಗಳನ್ನು ಕೈಬಿಡಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೆ ಡಬಲ್ ಡೆಕ್ಕರ್ ಗಳು ಸಂಚರಿಸಲಿದ್ದು ಈ ತಿಂಗಳಲ್ಲಿಯೇ ಅವುಗಳು ರಸ್ತೆಗಿಳಿಯಲಿವೆ ಎನ್ನಲಾಗಿದೆ. ನಗರ ಭೂ ಸಾರಿಗೆ (DULT) ನಿಧಿಗಳ ನಿರ್ದೇಶನಾಲಯದ ಅಡಿಯಲ್ಲಿ ಐದು ಡಬಲ್ ಡೆಕ್ಕರ್ AC ಎಲೆಕ್ಟ್ರಿಕ್ ಬಸ್‌ಗಳಿಗೆ ರೂ 10 ಕೋಟಿ ಟೆಂಡರ್ ನೀಡಲಾಗಿದ್ದು ಸ್ವಿಚ್ ಮೊಬಿಲಿಟಿ ಕಂಪನಿ ಟೆಂಡರ್ ಪಡೆದುಕೊಂಡಿದೆ. “ನಾವು ಮಾರ್ಚ್‌ನೊಳಗೆ ಮೊದಲ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಅನ್ನು ಕಾಣಲಿದ್ದೇವೆ. ಏಪ್ರಿಲ್-ಮೇ ವೇಳೆಗೆ ಇನ್ನೂ ನಾಲ್ಕು ಬಸ್ ಗಳು ಕಾರ್ಯನಿರ್ವಹಿಸಲಿವೆ. ಹೆಬ್ಬಾಳ-ಸಿಲ್ಕ್ ಬೋರ್ಡ್‌ನಲ್ಲಿ ನಿಯಮಿತ ಪ್ರಯಾಣಿಕರ ಸೇವೆಗಾಗಿ ಕಾರ್ಯನಿರ್ವಹಿಸಲು ಯೋಚಿಸುತ್ತಿದ್ದೇವೆ ಮತ್ತು ದರವು ವಜ್ರ (ವೋಲ್ವೋ ಎಸಿ) ಯಂತೆಯೇ ಇರುತ್ತದೆ.” ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಎವಿ ಸೂರ್ಯ ಸೇನ್ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.
ಆಗಸ್ಟ್ 2022 ರಲ್ಲಿ, ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ವಾಹನಗಳ ಅಂಗಸಂಸ್ಥೆಯಾದ ಸ್ವಿಚ್ ಮೊಬಿಲಿಟಿ, ಭಾರತದ ಮೊದಲ ಮತ್ತು ವಿಶಿಷ್ಟವಾದ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಹವಾನಿಯಂತ್ರಿತ ಬಸ್ ‘ಸ್ವಿಚ್ ಇಐವಿ 22’ ಅನ್ನು ಅನಾವರಣಗೊಳಿಸಿದೆ. ಇದನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಇದು 250 ಕಿಮಿ ವ್ಯಾಪ್ತಿ ಹೊಂದಿದ್ದು ಎರಡುಪಟ್ಟು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಬಹುದಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಈ ಮೇಡ್ ಇನ್ ಇಂಡಿಯಾ ಬಸ್ಸುಗಳು ರಸ್ತೆಗಿಳಿಯಲಿವೆ.