ಮಡಿಕೇರಿ: 29 ಮಂದಿ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಸೋಂಕು

ಹೊಸ ದಿಗಂತ ವರದಿ, ಮಡಿಕೇರಿ:

ನಗರದ ಗಾಂಧಿ ಮೈದಾನ ಮುಂದೆ ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ 29 ಮಂದಿ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕಾರ್ಮಿಕರು ಕೆಲವು ದಿನಗಳ ಹಿಂದೆ ಅಸ್ಸಾಂ ಮತ್ತು ಜಾರ್ಖಂಡ್‍ನಿಂದ ಆಗಮಿಸಿದ್ದು, ಪ್ರಸ್ತುತ ಕಟ್ಟಡವನ್ನು ಸೀಲ್‍ಡೌನ್ ಮಾಡಲಾಗಿದೆ.
ಈ ಬಹು ಮಹಡಿ ಕಟ್ಟಡದಲ್ಲಿ ಒಟ್ಟು 150 ಮಂದಿ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎರಡು ದಿನಗಳ ಹಿಂದೆ ಇಬ್ಬರಿಗೆ ಜ್ವರ ಮತ್ತು ಶೀತ ಕಂಡು ಬಂದಿತ್ತು. ಈ ವೇಳೆ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಎಲ್ಲಾ 150 ಮಂದಿ ಕಾರ್ಮಿಕರನ್ನು ಸೋಮವಾರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಮಂಗಳವಾರ ಕೆಲವು ಕಾರ್ಮಿಕರ ವೈದ್ಯಕೀಯ ವರದಿ ಬಂದಿದ್ದು, ಒಟ್ಟು 29 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮತ್ತು ಸಿಬ್ಬಂದಿಗಳು ಕಾರ್ಮಿಕರ ಬಗ್ಗೆ ಮಾಹಿತಿ ಕಲೆ ಹಾಕಿ ಇಡೀ ಕಟ್ಟಡವನ್ನು ಸೀಲ್ ಡೌನ್ ಮಾಡುವಂತೆ ಆದೇಶಿಸಿದರು. ತೀವ್ರ ಸ್ವರೂಪದ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾಗುವಂತೆ ಸೂಚಿಸಿದರು. ಕಾರ್ಮಿಕರು ತಂಗಿರುವ ಸ್ಥಳದಲ್ಲಿ ಅಗತ್ಯ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಡಾ. ವೆಂಕಟೇಶ್ ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!