ಬಿಜೆಪಿಯೇತರ ರಾಜ್ಯಗಳ ಗಣರಾಜ್ಯೋತ್ಸವ ಸ್ತಬ್ಧಚಿತ್ರ ಟಾರ್ಗೆಟ್ ಆಯ್ತಾ?- ಸಚಿವ ರಾಜನಾಥರ ಪತ್ರದಲ್ಲಿದೆ ಫ್ಯಾಕ್ಟ್ ಚೆಕ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ಬಗ್ಗೆ ಕಳೆದ ಮೂರು ದಿನಗಳಿಂದ ಭಾರೀ ಚರ್ಚೆ ನಡೆಯುತ್ತಿದೆ. ಮೊದಲು ಕೇರಳ, ನಂತರ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಈ ಕುರಿತು ತಕರಾರು ಎಬ್ಬಿಸಿದೆ. ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಲಾಗಿದೆ ಎಂಬುದು ಇವರೆಲ್ಲರ ಆರೋಪ.

ಆದರೆ, ವಾಸ್ತವ ಏನು? ಪ್ರತಿವರ್ಷವೂ ಎಲ್ಲ ರಾಜ್ಯಗಳಿಗೂ ಅವಕಾಶ ಕೊಡಲಾಗುವುದಿಲ್ಲ. ಸಮಯಮಿತಿ ಕಾರಣದಿಂದ ಪರಿಣತರ ಸಮಿತಿಯು ಸ್ತಬ್ಧಚಿತ್ರಗಳ ವಿನ್ಯಾಸ ಮೌಲ್ಯಮಾಪನ ಮಾಡಿ ಕೆಲವಷ್ಟಕ್ಕೆ ಅವಕಾಶ ಕೊಡುತ್ತದೆ. ಇದು ಮೋದಿ ಸರ್ಕಾರ ಅಂತಲ್ಲ, ಈ ಹಿಂದಿನಿಂದಲೂ ಬಂದ ನಡಾವಳಿ.

ಇದನ್ನೇ ರಕ್ಷಣಾ ಸಚಿವ ರಾಜನಾಥ ಸಿಂಗರ ಪತ್ರ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಮಜಾಯಿಷಿಗಳೂ ಹೇಳಿವೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ಯಾಬ್ಲೋ ವಿಷಯದ ಬಗ್ಗೆ ನಡೆಯುತ್ತಿರುವ ರಾಜಕೀಯವನ್ನು ಟೀಕಿಸಿದ್ದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಜ. 26ರ ಪರೇಡ್‌ನಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವ ಕ್ರಮವನ್ನು ವಿವರವಾದ ಮಾರ್ಗಸೂಚಿಗಳ ಪ್ರಕಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಚಳುವಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಕೊಡುಗೆಯನ್ನು ಪಶ್ಚಿಮ ಬಂಗಾಳ ಸ್ತಬ್ಧಚಿತ್ರದ ಮೂಲಕ ಪ್ರದರ್ಶಿಸಿದರೆ, ತಮಿಳುನಾಡು ಸಲ್ಲಿಸಿದ ವಿನ್ಯಾಸವು ಸ್ವಾತಂತ್ರ್ಯ ಹೋರಾಟಗಾರ ವಿ.ಒ. ಚಿದಂಬರನಾರ್ ಅವರನ್ನು ಒಳಗೊಂಡಿತ್ತು. ತಮ್ಮ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡದಿರುವ ಬಗ್ಗೆ ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ಇಬ್ಬರೂ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಗಳನ್ನು ಬರೆದಿದ್ದಾರೆ.

ಬ್ಯಾನರ್ಜಿಗೆ ಬರೆದ ಪತ್ರದಲ್ಲೇನಿದೆ?
ಇದೀಗ ರಾಜನಾಥ್ ಸಿಂಗ್ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ, ನರೇಂದ್ರ ಮೋದಿ ಸರಕಾರವು ನೇತಾಜಿಯವರನ್ನು ಗೌರವದಿಂದ ಕಾಣುತ್ತಿದೆ ಮತ್ತು ಅವರ ಜನ್ಮದಿನವಾದ ಜ. 23 ಅನ್ನು ‘ಪರಾಕ್ರಮ್ ದಿವಸ್’ ಎಂದು ಆಚರಿಸುತ್ತದೆ. ಇನ್ನು ಮುಂದೆ ಅವರ ಜನ್ಮ ದಿನಾಚರಣೆಯೊಂದಿಗೆ ಗಣರಾಜ್ಯೋತ್ಸವ ಆಚರಣೆಗಳು ಆರಂಭಗೊಂಡು ಜ. 30ರಂದು ಮುಕ್ತಾಯಗೊಳ್ಳಲಿದೆ ಎಂದು ವಿವರಿಸಿದ್ದಾರೆ.

ಗಣರಾಜ್ಯೋತ್ಸವದ ಪರೇಡ್‌ಗಾಗಿ ಸ್ತಬ್ಧಚಿತ್ರ ಆಯ್ಕೆ ಮಾಡುವ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ. ಕಲೆ, ಸಂಸ್ಕೃತಿ, ಸಂಗೀತ ಮತ್ತು ನೃತ್ಯ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿಯು ರಾಜ್ಯಗಳು ಕಳುಹಿಸಿರುವ ವಿನ್ಯಾಸ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುತ್ತದೆ ಎಂದು ರಾಜನಾಥ್ ಸಿಂಗ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸ್ಟಾಲಿನ್‌ಗೆ ಕಳುಹಿಸಿದ ಪತ್ರದಲ್ಲಿ…
ತಮಿಳುನಾಡು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, ಸ್ತಬ್ಧಚಿತ್ರದ ಆಯ್ಕೆಯನ್ನು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ. ತಮಿಳುನಾಡು ರಾಜ್ಯದ ವಿನ್ಯಾಸವು ಮೊದಲ ಮೂರು ಸುತ್ತಿನಲ್ಲಿ ಆಯ್ಕೆಯಾಗಿದ್ದರೂ ಅಂತಿಮವಾಗಿ ಆಯ್ಕೆ ಮಾಡಿದ 12 ಸ್ತಬ್ಧಚಿತ್ರಗಳ ಪಟ್ಟಿಗೆ ಸೇರಿಸಲು ಸಾಧ್ಯವಾಗಲಿಲ್ಲ. ಈ ಕುರಿತು ವಿಷಾದ ಸೂಚಿಸುವ ಜೊತೆಗೆ, ಎರಡೂ ರಾಜ್ಯಗಳು ಆಚರಣೆಯಲ್ಲಿ ಪಾಲ್ಗೊಳ್ಳುತ್ತವೆ ಎಂದು ರಾಜನಾಥ್ ಸಿಂಗ್ ಆಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!