Friday, July 1, 2022

Latest Posts

ಮಡಿಕೇರಿ: ಗೌಡ ಕುಟುಂಬಗಳ ನಡುವಿನ ಫುಟ್ಬಾಲ್‌ ಟೂರ್ನಿಗೆ ಚಾಲನೆ; 40 ಕ್ಕೂ ಹೆಚ್ಚು ತಂಡಗಳು ಭಾಗಿ

ಹೊಸದಿಗಂತ ವರದಿ, ಮಡಿಕೇರಿ
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ಕಾವೇರಿ ಮಾತೆಯ ಹೆಸರಿನಲ್ಲಿ ಕೊಡವ ಹಾಗೂ ಗೌಡ ಜನಾಂಗದವರ ನಡುವೆ ಬಿರುಕು ಮೂಡಿಸುವ ಕೆಲಸ‌ ಮಾಡುತ್ತಿರುವುದು ಅತ್ಯಂತ ಖೇದಕರವಾಗಿದೆ. ಕೊಡವ ಹಾಗೂ ಗೌಡ ಎಂಬ ಬೇಧ ಭಾವವಿಲ್ಲದೆ ನಾವೆಲ್ಲರೂ ಭಾರತ ದೇಶದ ಮಣ್ಣಿನ ಮಕ್ಕಳಾಗೇ ಬಾಳಿದರೆ ಮಾತ್ರ ಕೊಡಗಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಪಟ್ಟರು.
ಚೇರಳ ಗೌಡ ಸಂಘ (ರಿ) ,ಯುವ ಬ್ರಿಗೇಡ್ ಸಮಿತಿ ಚೆಟ್ಟಳ್ಳಿ ಇವರ ವತಿಯಿಂದ ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಿನ ಕಾಲ್ಚೆಂಡು ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಾವೇರಿ ತಾಯಿಯ ತವರು, ಕೊಡಗು ಜಿಲ್ಲೆಯ ಮೂಲ‌ ಸಂಸ್ಕೃತಿ ಇತ್ತೀಚಿನ ಕಾಲದಲ್ಲಿ ನಶಿಸಿ ಹೋಗುತ್ತಿರುವುದು ಬೇಸರದ ವಿಷಯವಾಗಿದೆ. ಈ ಮಧ್ಯೆ ಕೊಡವ, ಗೌಡ ಎಂಬ ತಾರತಮ್ಯವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸುತ್ತಿದ್ದಾರೆ. ಕೊಡವ ಹಾಗೂ ಗೌಡ ಜನಾಂಗದವರು ಒಂದಾಗಿ ಜಿಲ್ಲೆಯ ಮೂಲ ಸಂಸ್ಕೃತಿಯನ್ನು ಉಳಿಸಲು ಪಣತೊಡಬೇಕಾಗಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ಸಲಹೆ ಮಾಡಿದರು.
ಚೇರಳ ಗೌಡ ಜನಾಂಗದವರು ಶ್ರಮ ಜೀವಿಗಳಾಗಿದ್ದು, ಹಿಂದಿ‌ನ ಕಾಲದಲ್ಲಿ ಚೇರಳ ಗೌಡ ಸಂಘದಲ್ಲಿರುವ ವಿವಿಧ ಕುಟುಂಬಗಳ ಹಿರಿಯರು ಮಾಡುತ್ತಿದ್ದ ಕಿತ್ತಳೆ ಹಾಗೂ ಕಾಫಿ ಗಿಡವನ್ನು ಕೊಂಡುಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಬೆಳೆಗಾರರು ಹಾಗೂ ರೈತರು ಚೆಟ್ಟಳ್ಳಿ ಭಾಗಗಕ್ಕೆ ಬರುತ್ತಿದ್ದರು. ಇಂದಿನ ದಿನಗಳಲ್ಲಿ ತಮ್ಮ ಸ್ವಂತ ಭೂಮಿಯನ್ನು ಮಾರಾಟ ಮಾಡಿ ನಗರ ಪ್ರದೇಶಗಳಲ್ಲಿ ಬೆಳೆಗಾರರು ಸೇರಿಕೊಳ್ಳುತ್ತಿದ್ದಾರೆ‌. ಆದರೆ ಚೇರಳ ಗೌಡ ಕುಟುಂಬದವರು ಯಾರೂ ತಮ್ಮ ಸ್ವಂತ ನೆಲವನ್ನು ಮಾರಾಟದ ಮಾಡದೆ, ತಮ್ಮ ಮುಂದಿನ ಪೀಳಿಗೆಗೆ ಸಂಸ್ಕೃತಿ, ಭಾಷೆಯನ್ನು ಉಳಿಸುವಲ್ಲಿ ಮಾದರಿಯಾಗಿದ್ದಾರೆ ಎಂದು ಮಣಿ ಉತ್ತಪ್ಪ ಶ್ಲಾಘಿಸಿದರು.
ಚೇರಳ ಗೌಡ ಸಂಘದ ಕಟ್ಟದ ಉದ್ಘಾಟನೆ ಕೂಡಾ ಶೀಘ್ರದಲ್ಲೇ ನಡೆಯಲಿ ಹಾಗೂ ಕಟ್ಟಡದ ಕಾಮಗಾರಿಗಳಿಗೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದೆಂದು ಅವರು ಹೇಳಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಚೇರಳ ಗೌಡ ಸಂಘದ,ಯುವ ಬಿಗ್ರೇಡ್’ನ ಯುವಕರ ಪಡೆ ಅಚ್ಚುಕಟ್ಟಾಗಿ ಮೈದಾದನ ವ್ಯವಸ್ಥೆಯನ್ನು ಮಾಡಿದ್ದಾರೆ. ಕ್ರೀಡೆ ಬರೀ ಕ್ರೀಡೆಗೆ ಸೀಮಿತವಾಗದೆ, ಗೌಡ ಕುಟುಂಬಗಳ ಸಮ್ಮಿಲನಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲಾ ಗೌಡ ಕುಟುಂಬಗಳು ಒಂದೇ ವೇದಿಕೆಯಲ್ಲಿ ಭಾಗವಹಿಸುವುದರಿಂದ ಕುಟುಂಬಗಳ ನಡುವಿನ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇರಳ ಗೌಡ ಸಂಘದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ, ಇತ್ತೀಚಿನ ದಿನಗಳಲ್ಲಿ ಯವಕರು ಆಧುನಿಕ ಯುಗದಲ್ಲಿ ಮುಳುಗಿ ಹೋಗಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಖಿನ್ನತೆಗೆ ಒಳಗಾಗುತ್ತಿರುವ ಆತಂಕಕಾರಿ ಸುದ್ದಿಗಳು ದಿನನಿತ್ಯ ನಾವು ಓದುತ್ತಿದ್ದೇವೆ. ಕ್ರೀಡೆಯಿಂದ ಯುವಕರು ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದ್ದು, ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಮೂರು ದಿನಗಳ ಕಾಲ ನಡೆಯುವ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸೋಲು -ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವನೆಯಿಂದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕೆಂದು ಅಯ್ಯಂಡ್ರ ರಾಘವಯ್ಯ ಕರೆ ನೀಡಿದರು.
ಗೌಡ ಕುಟುಂಬಗಳ ಕಾಲ್ಚೆಂಡು ಪಂದ್ಯಾವಳಿಯಲ್ಲಿ 40 ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದು, ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಫೈನಲ್ ಪಂದ್ಯಾಟ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss