ಹೊಸದಿಗಂತ ವರದಿ, ಮಡಿಕೇರಿ:
ತಾಲೂಕು ಬಾಲ ಭವನ ಸಮಿತಿ, ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೂರ್ನಾಡು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಗೀತೆ ಸ್ಪರ್ಧೆ ನಡೆಯಿತು.
ಸುಮಾರು 100ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪ್ರಾಸ್ತವಿಕವಾಗಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಅವರು, ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಈ ಕಾರ್ಯಕ್ರಮ ವೇದಿಕೆಯಾಗಿದ್ದು, ಕನ್ನಡ ಗೀತೆಯಲ್ಲಿ ಆಸಕ್ತಿ ಮೂಡಿಸುವ ಕನ್ನಡ ಅಭಿಮಾನವನ್ನು ಹೆಚ್ಚಿಸಿಕೊಳ್ಳುವ ಹಾಗೂ ಗೌರವಿಸುವ ಭಾವನೆಯನ್ನು ಮಕ್ಕಳು ಹೊಂದಬೇಕು ಎಂದು ಕರೆ ನೀಡಿದರು.
ಓದುವುದರೊಂದಿಗೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಇಂತಹ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳಲು ಎಲ್ಲರೂ ಮುಂದಾಗಾಬೇಕು ಎಂದು ತಿಳಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಮೂರ್ನಾಡು ಗ್ರಾ.ಪಂ.ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಎಸ್‍ಡಿಎಂಸಿ ಅಧ್ಯಕ್ಷ ದಿನೇಶ್, ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತ, ಸಂಪನ್ಮೂಲ ವ್ಯಕ್ತಿಗಳಾದ ಪ್ರೀತಾ ಮತ್ತು ಚೈತ್ರಾ, ಇತರರು ಇದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 5-8 ವರ್ಷದ ಮಕ್ಕಳ ವಿಭಾಗದಲ್ಲಿ ಮೂರ್ನಾಡು ಸ.ಮಾ.ಪ್ರಾ.ಶಾಲೆಯ ಪ್ರಾರ್ಥನ (ಪ್ರಥಮ), ಮೂರ್ನಾಡು ಜ್ಞಾನಜ್ಯೋತಿ ಶಾಲೆಯ ಹೃತ್ವಿಕ್ ಪೊನ್ನಮ್ಮ (ದ್ವಿತೀಯ), ಮೂರ್ನಾಡು ಸ.ಮಾ.ಪ್ರಾ.ಶಾಲೆಯ ಪುಣ್ಯಶ್ರೀ ಟಿ.ಕೆ (ತೃತೀಯ), 9-12 ವರ್ಷದ ಮಕ್ಕಳಲ್ಲಿ ವಾಟೆಕಾಡು ಸ.ಹಿ.ಪ್ರಾ.ಶಾಲೆಯ ಲಖಿತ (ಪ್ರಥಮ), ಮೂರ್ನಾಡು ಸ.ಮಾ.ಪ್ರಾ.ಶಾಲೆಯ ಸುಕನ್ಯ(ದ್ವಿತೀಯ), ನಾಪೋಕ್ಲು ಶ್ರೀ ರಾಮ ಟ್ರಸ್ಟ್‌ನ ಶಮಿಕ(ತೃತೀಯ), 13-16 ವರ್ಷದ ಮಕ್ಕಳ ಪೈಕಿ ಮೂರ್ನಾಡು ಮಾರುತಿ ಎಜುಕೇಷನ್ ಟ್ರಸ್ಟ್ ಬಿಂದ್ಯಾ(ಪ್ರಥಮ), ಕೊಟ್ಟಮುಡಿ ಮರ್ಕಜ್ ಶಾಲೆಯ ಷಹರಿಯ (ದ್ವಿತೀಯ) ಹಾಗೂ ಮೂರ್ನಾಡು ಮಾರುತಿ ಎಜುಕೇಷನ್ ಟ್ರಸ್ಟ್‌ನ ತಸ್ನೀಯಾ(ತೃತೀಯ) ಸ್ಥಾನ ಪಡೆದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ