ಮಡಿಕೇರಿ: ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು: ಕಿಡಿಕಿಡಿಯಾದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್

ಹೊಸದಿಗಂತ ವರದಿ, ಮಡಿಕೇರಿ
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜನೆಯಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಸಭೆಗೆ ಅನೇಕ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಪ್ರಸಕ್ತ 2021-22 ಸಾಲಿನ ಫೆಬ್ರವರಿ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಸೆಸ್ಕ್ ಎಇಇ ಗೈರು ಹಾಜರಿಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಯೊಬ್ಬರು, ಮಹತ್ವದ ಸಭೆಗೆ ತೆರಳಿರುವುದಾಗಿ ಕಾರಣ ನೀಡಿದರು. ತಕ್ಷಣವೇ ಸಚಿವ ಬಿ.ಸಿ. ನಾಗೇಶ್ ಅವರು, ಸೆಸ್ಕ್ ಮೇಲಧಿಕಾರಿಗೆ ಕರೆ ಮಾಡಿದಾಗ, ಅಂತಹ ಮಹತ್ವದ ಸಭೆ ಇಲ್ಲವೆಂದು ತಿಳಿಸುವುದರೊಂದಿಗೆ, ಎಇಇ ಅವರ ಗೈರು ಹಾಜರಿಗೆ ಸುಳ್ಳು ಕಾರಣ ನೀಡಿರುವುದು ಸ್ಪಷ್ಟವಾಯಿತು. ಇದರಿಂದ ಕುಪಿತರಾದ ಸಚಿವರು, ಅಧಿಕಾರಿಯ ಗೈರು ಹಾಜರಿಯ ಬಗ್ಗೆ ಸುಳ್ಳು ಹೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಮುಂದೆ ಹೀಗೆ ನಡೆದುಕೊಂಡಲ್ಲಿ ಕೆಲಸದಿಂದ ಅಮಾನತುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರಕ್ಕಿಂತ ಮೇಲಿದ್ದಾರೆಯೇ?: ಮಹತ್ವದ ಸಭೆಗೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾರದಿರುವುದನ್ನು ಗಮನಿಸಿದ ಸಚಿವ ನಾಗೇಶ್ ಅವರು, ‘ಅವರೇನು ಸರ್ಕಾರಕ್ಕಿಂತ ಮೇಲಿದ್ದಾರೆಯೇ’ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಈ ಸಂದರ್ಭ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂಎಲ್‍ಸಿ ಭೋಜೇಗೌಡ ಅವರು ಒತ್ತಾಯಿಸಿದರು.
ಹಿಂದಿನ ಸಭೆಗಳಲ್ಲಿ ಕೇಳಿ ಬಂದ ಸಮಸ್ಯೆಗಳು ಇಲ್ಲಿಯವರೆಗೂ ಬಗೆಹರಿಯದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರದಲ್ಲಿ ಮತ್ತು ತಾಲೂಕುಗಳಲ್ಲಿ ಸೈನಿಕ ಭವನ ನಿರ್ಮಾಣಕ್ಕೆ ಜಾಗ ಒದಗಿಸಲಾಗುವುದು. ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ನಾಗೇಶ್, ಜನಪರವಾಗಿ ವಿಳಂಬವಿಲ್ಲದೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಎಂಎಲ್‍ಸಿ ಸುಜಾ ಕುಶಾಲಪ್ಪ, ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಸಿಇಓ ಭಂವರ್ ಸಿಂಗ್ ಮೊದಲಾದವರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!