ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂದಿನ ಮಕ್ಕಳಿಗೆ ಅಗತ್ಯವಿರುವುದು ಆಧುನಿಕ ಶಿಕ್ಷಣ. ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಅವರು ಇಚ್ಛೆಯ ಕ್ಷೇತ್ರದಲ್ಲಿ ಸಾಧಿಸುವ ಆಯ್ಕೆ ಹೊಂದಿರುತ್ತಾರೆ. ಎಲ್ಲಾ ಮಕ್ಕಳು ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ, ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಲಾಗಿದೆ. ಅಧುನಿಕ ಶಿಕ್ಷಣ ಪದ್ದತಿಯೂ ಸಾಕಷ್ಟು ಬೆಳೆದಿದೆ. ಮನೆಯಲ್ಲಿಯೇ ನೀಡಬಹುದಾದ ಧಾರ್ಮಿಕ ಶಿಕ್ಷಣವನ್ನು ಮದರಸಾಗಳಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಅವಧಿಯುದ್ದಕ್ಕೂ ಬೋಧಿಸುವ ಮೂಲಕ ಯಾವ ಸಾಧನೆ ಮಾಡಲು ಯತ್ನಿಸುತ್ತಿದ್ದೀರಿ? ಮದರಸಾಗಳಲ್ಲಿ ಶಿಕ್ಷಣ ನೀಡುವ ಔಚಿತ್ಯವೇನಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಸ್ವಾ, ಎಲ್ಲಾ ಮಕ್ಕಳಿಗೂ ಶಾಲೆಗಳಲ್ಲಿ “ಸಾಮಾನ್ಯ ಶಿಕ್ಷಣ” ಸಿಗಬೇಕು ಎಂಬ ವಿಚಾರವನ್ನು ಒತ್ತಿಹೇಳಿದರು. “ಮದರಸಾ” ಎಂಬ ಪದ ಇರುವವರೆಗೂ ಮಕ್ಕಳು ವೈದ್ಯರು ಮತ್ತು ಇಂಜಿನಿಯರ್ ಆಗುವ ಬಗ್ಗೆ ಯೋಚಿಸಲು ಸಾಧ್ಯವಾಗುವುದಿಲ್ಲ. ಮದರಸಾಗಳಲ್ಲಿ ಓದಿದರೆ ಡಾಕ್ಟರ್, ಇಂಜಿನಿಯರ್ ಆಗುವುದಿಲ್ಲ ಎಂದು ಹೇಳಿದರೆ ಅವರೇ ಹೋಗಲು ನಿರಾಕರಿಸುತ್ತಾರೆ. ನಿಮ್ಮ ಮಕ್ಕಳಿಗೆ ಅಗತ್ಯವಿದ್ದರೆ ಮನೆಯಲ್ಲಿ ಕುರಾನ್ ಕಲಿಸಿ. ಆದರೆ ಅವರನ್ನು ಮದರಸಾಗಳಿಗೆ ಸೇರಿಸುವುದು ಅವರ ಮಾನವ ಹಕ್ಕುಗಳ ಉಲ್ಲಂಘನೆ ಎಂದರು.
ಮದರಸಾಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬೇರೇನನ್ನೂ ಸಾಧಸಲು ಆಯ್ಕೆಗಳನ್ನು ನೀಡುವುದಿಲ್ಲ. ಮಕ್ಕಳಿಗೆ ವಿಜ್ಞಾನ, ಗಣಿತ, ಜೀವಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರವನ್ನು ಕಲಿಸಲು ಒತ್ತು ನೀಡಬೇಕು. ಅವರು ಅವರಿಷ್ಟದ ವಿಷಯಗಳಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಬೇಕು ಎಂದು ಬಿಸ್ವಾ ಅಭಿಪ್ರಾಯಪಟ್ಟರು.
ಧಾರ್ಮಿಕ ಶಿಕ್ಷಣಕ್ಕೆ ಆಧ್ಯತೆ ನೀಡುವ “ಮದರಸಾ” ಗಳ ಶಿಕ್ಷಣಕ್ಕೆ ಮಾನ್ಯತೆಯಿಲ್ಲ. ಶಿಕ್ಷಣದ ಆಯ್ಕೆಯನ್ನು ಮಕ್ಕಳಿಗೆ ಬಿಡಬೇಕು ಎಂದು ಅವರು ಹೇಳಿದರು. ಈ ವೇಳೆ ಮದರಸಾಗಳಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಂತರು, ಕುರಾನ್‌ನ ಪ್ರತಿಯೊಂದು ಪದವನ್ನು ಸುಲಭವಾಗಿ ನೆನಪಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶರ್ಮಾ, ಭಾರತದಲ್ಲಿನ ಎಲ್ಲಾ ಮುಸ್ಲಿಮರು ಹಿಂದೂಗಳು, ಅವರ ಪೂರ್ವಜರು ಹಿಂದೆ ಹಿಂದೂಗಳಾಗಿದ್ದವರು. ಒಂದು ಮುಸ್ಲಿಂ ಮಗು ಅತ್ಯಂತ ಪುಣ್ಯವಂತನಾಗಿದ್ದರೆ ಬಹುಷಃ ಅವನ ಗತಕಾಲದ ಹಿಂದೂ ಪೂರ್ವಜರ ಸ್ಮೃತಿ ಕಾರಣವಾಗಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.