ಗ್ಯಾಂಗ್‌ಸ್ಟರ್ ಅತಿಕ್ ಅಹ್ಮದ್‌, ಸಹೋದರ ಅಶ್ರಫ್‌ ಕೊಲೆ: 17 ಪೊಲೀಸ್ ಸಿಬ್ಬಂದಿ ಸಸ್ಪೆಂಡ್‌, ಸೆಕ್ಷನ್‌ 144 ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್‌, ರಾಜಕಾರಣಿ ಅತಿಕ್ ಅಹ್ಮದ್‌, ಸಹೋದರ ಅಶ್ರಫ್​ನನ್ನು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅತಿಕ್ ಅಹ್ಮದ್‌ ಭದ್ರತೆ ಹೊಣೆ ಹೊತ್ತಿದ್ದ 17 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಪ್ರಕಟಿಸಿದೆ.

ಅತಿಕ್‌ ಶೂಟೌಟ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಿದೆ. ಇನ್ನು ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲೂ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆದೊಯ್ದಿದ್ದಾಗ ಪ್ರಯಾಗ್‌ರಾಜ್‌ನ ಮೆಡಿಕಲ್ ಕಾಲೇಜು ಬಳಿ ಪೊಲೀಸರ ಎದುರೇ ಮೂವರು ಯುವಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಯುವಕರು ಸ್ಥಳದಲ್ಲೇ ಪೊಲೀಸರಿಗೆ ಶರಣಾಗಿದ್ದಾರೆ.

ಕೆಲ ದಿನಗಳ ಹಿಂದೆ ಪೊಲೀಸರು ಅತಿಕ್ ಅಹ್ಮದ್‌ ಪುತ್ರನನ್ನು ಎನ್‌ಕೌಂಟರ್‌ ಮಾಡಿದ್ದರು. ಅತಿಕ್ ಅಹ್ಮದ್‌ ಪುತ್ರನ ಅಂತ್ಯಕ್ರಿಯೆ ನಿನ್ನೆ ನೆರವೇರಿತ್ತು.

2006ರಲ್ಲಿ ಉಮೇಶ್‌ ಪಾಲ್‌ ಅಪಹರಣ ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ಅತೀಕ್‌ ಅಹ್ಮದ್‌ ದೋಷಿ ಎಂದು ಪ್ರಯಾಗರಾಜ್‌ ನ್ಯಾಯಾಲಯ ತೀರ್ಪು ಕೊಟ್ಟಿತ್ತು. ಹನೀಫ್ ಮತ್ತು ದಿನೇಶ್ ಪಾಸಿ ಅವರಿಗೆ ಪ್ರಯಾಗ್‌ರಾಜ್‌ನಲ್ಲಿರುವ ಎಂಪಿ/ಎಂಎಲ್ಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೊಲೆ ಮತ್ತು ಅಪಹರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಮಾಜಿ ಸಂಸದ ಮತ್ತು ಶಾಸಕ ಅತೀಕ್ ಅಹ್ಮದ್ ಎದುರಿಸುತ್ತಿದ್ದರು.

ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ 2005 ರ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆಯ ಒಂದು ತಿಂಗಳ ನಂತರ ಅಹ್ಮದ್​​ಗೆ ಶಿಕ್ಷೆಯಾಗಿತ್ತು. ಫೆಬ್ರವರಿ 24 ರಂದು ಪ್ರಯಾಗರಾಜ್‌ನಲ್ಲಿ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹಿಂಬದಿ ಸೀಟಿನಿಂದ ಹೊರಗಿಳಿಯುತ್ತಿದ್ದಾಗ ಉಮೇಶ್ ಪಾಲ್​​ನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರ ಜೊತೆಗಿದ್ದ ಇಬ್ಬರು ಪೊಲೀಸ್ ಅಂಗರಕ್ಷಕರೂ ಶೂಟೌಟ್‌ನಲ್ಲಿ ಹತ್ಯೆಯಾಗಿದ್ದರು.

2005ರ ಕೊಲೆಯಲ್ಲಿ ಉಮೇಶ್ ಪಾಲ್ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದ ಅತಿಕ್ ಅಹ್ಮದ್ ಹತ್ಯೆಗೈದಿದ್ದಾನೆ ಎಂದು ಯುಪಿ ಪೊಲೀಸರು ಹೇಳಿಕೆ ನೀಡಿದ್ದರು. 2006 ರಲ್ಲಿ ಉಮೇಶ್ ಪಾಲ್ ಅವರು ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಹಿಂಪಡೆಯಲು ನಿರಾಕರಿಸಿದಾಗ ಬಂದೂಕು ತೋರಿಸಿ ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!