September 23, 2026
Wednesday, September 23, 2026
spot_img

ಊಟದ ತಟ್ಟೆಗಳಲ್ಲಿ ಜಿರಳೆ, ಅಡಕೆ ಪ್ಲೇಟ್‌ನಲ್ಲಿ ಫಂಗಸ್: ವಿಕಾಸಸೌಧದ ಕ್ಯಾಂಟೀನ್ ಸೀಜ್ ಮಾಡಿದ ಆಹಾರ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ಬೆಂಗಳೂರಿನಲ್ಲಿ ಕಳಪೆ ಗುಣಮಟ್ಟದ ಆಹಾರ ಹಾಗೂ ಅಸ್ವಚ್ಛತೆ ಹೊಂದಿರುವ ಹೋಟೆಲ್‌ಗಳ ವಿರುದ್ಧ ಸಮರ ಸಾರಿರುವ ಆಹಾರ ಇಲಾಖೆ ಅಧಿಕಾರಿಗಳು ಇಂದು ಮತ್ತೊಂದು ದಾಳಿ ನಡೆಸಿದ್ದಾರೆ. ಸರ್ಕಾರದ ಪ್ರಮುಖ ಆಡಳಿತ ಕೇಂದ್ರವಾದ ವಿಕಾಸಸೌಧದ ಮೊದಲ ಮಹಡಿಯಲ್ಲಿರುವ ಕ್ಯಾಂಟೀನ್ ಮೇಲೆ ಇಂದು ಹಠಾತ್ ದಾಳಿ ನಡೆಸಲಾಗಿದ್ದು, ಭೀಕರ ಅಸ್ವಚ್ಛತೆ ಪತ್ತೆಯಾದ ಹಿನ್ನೆಲೆಯಲ್ಲಿ ಕ್ಯಾಂಟೀನ್ ಅನ್ನು ಸೀಜ್ ಮಾಡಲಾಗಿದೆ.

ಅಡುಗೆ ಕೋಣೆಯಲ್ಲಿ ಜಿರಳೆಗಳ ಸಾಮ್ರಾಜ್ಯ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಇಂದು ಮಧ್ಯಾಹ್ನ ವಿಕಾಸಸೌಧದ ಕ್ಯಾಂಟೀನ್ ಒಳಗೆ ಪರಿಶೀಲನೆ ನಡೆಸಿದಾಗ ಆಘಾತಕಾರಿ ದೃಶ್ಯಗಳು ಕಂಡುಬಂದಿವೆ. ಗ್ರಾಹಕರಿಗೆ ಆಹಾರ ನೀಡುವ ತಟ್ಟೆಗಳನ್ನು ಶೇಖರಿಸಿಡುವ ಜಾಗದಲ್ಲಿ ಸಾಲು ಸಾಲು ಜಿರಳೆಗಳು ಓಡಾಡುತ್ತಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಗ್ರಾಹಕರಿಗೆ ಊಟ ಬಡಿಸಲು ಇಟ್ಟಿದ್ದ ಅಡಕೆ ಪ್ಲೇಟ್‌ಗಳ ಮೇಲೆ ಫಂಗಸ್ ಬಂದಿರುವುದು ಅಧಿಕಾರಿಗಳ ತಪಾಸಣೆಯಲ್ಲಿ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.

ಸಾಲು ಸಾಲು ನಿಯಮ ಉಲ್ಲಂಘನೆ ಪತ್ತೆ

ಕ್ಯಾಂಟೀನ್‌ನಲ್ಲಿ ಕೇವಲ ಅಸ್ವಚ್ಛತೆ ಮಾತ್ರವಲ್ಲದೆ ಹತ್ತಾರು ನಿಯಮಗಳ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ತೀವ್ರ ಲೋಪ ಕಂಡುಬಂದಿದೆ. ಅಡುಗೆಗೆ ಬಳಸುತ್ತಿದ್ದ ಹಲವು ಕಚ್ಚಾ ಸಾಮಗ್ರಿಗಳು ಅವಧಿ ಮುಗಿದ ಪದಾರ್ಥಗಳಾಗಿದ್ದವು. ಹೋಟೆಲ್ ಹಾಗೂ ಕ್ಯಾಂಟೀನ್‌ಗಳಲ್ಲಿ ನಿಯಮಿತವಾಗಿ ಮಾಡಬೇಕಾದ ಪೆಸ್ಟ್ ಕಂಟ್ರೋಲ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು.

ಇದನ್ನೂ ಓದಿ;

ಕ್ಯಾಂಟೀನ್‌ಗೆ ಬಿದ್ದ ಬೀಗ

ಈ ಎಲ್ಲಾ ಗಂಭೀರ ನಿಯಮ ಉಲ್ಲಂಘನೆಗಳು ದೃಢಪಟ್ಟ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ತಕ್ಷಣವೇ ವಿಕಾಸಸೌಧದ ಈ ಕ್ಯಾಂಟೀನ್‌ಗೆ ಬೀಗ ಜಡಿದು ಸೀಜ್ ಮಾಡಿದ್ದಾರೆ. ಸದ್ಯ ಕ್ಯಾಂಟೀನ್‌ನ ಮುಂಭಾಗದಲ್ಲಿ ‘ತಾತ್ಕಾಲಿಕವಾಗಿ ಕ್ಯಾಂಟೀನ್ ಬಂದ್’ ಎಂಬ ನಾಮಫಲಕವನ್ನು ಅಳವಡಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !