ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳವು ವಿಶ್ವದ ಗಮನ ಸೆಳೆದಿದೆ. ಉತ್ತರ ಪ್ರದೇಶ ಸರ್ಕಾರದ ವತಿಯಿಂದ ಈ ಅದ್ಧೂರಿ ಕಾರ್ಯಕ್ರಮ ನೆರವೇರುತ್ತಿದೆ. ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಇಡೀ ಮಂತ್ರಿಮಂಡಲದೊಂದಿಗೆ ಪ್ರಯಾಗ್‌ರಾಜ್‌ಗೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಇಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಇಂದು (ಬುಧವಾರ) ಮಧ್ಯಾಹ್ನ ಯೋಗಿ ಆದಿತ್ಯನಾಥ್ ಮತ್ತು ಸಚಿವರು ಸಂಗಮದಲ್ಲಿ ಸ್ನಾನ ಮಾಡಿದರು.
ಬಿಗಿ ಭದ್ರತೆಯ ನಡುವೆ ಸಿಎಂ ಆದಿತ್ಯನಾಥ್ ಹಾಗೂ ಅವರನ್ನು ಸುತ್ತುವರಿದ ಮಂತ್ರಿಗಳು ಕೆಲ ಕಾಲ ಸಂಗಮದಲ್ಲಿ ಸಂಭ್ರಮದ ಕ್ಷಣಗಳನ್ನು ಕಳೆದರು.
ಆದಿತ್ಯನಾಥ್ ಜತೆಗೆ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಅಲ್ಪಸಂಖ್ಯಾತರ ಕಲ್ಯಾಣ, ಮುಸ್ಲಿಂ ವಕ್ಸ್ ಮತ್ತು ಹಜ್ ಖಾತೆ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ, ಮಿತ್ರಪಕ್ಷ ಅಪ್ಪಾ ದಳದ (ಎಸ್) ಸಚಿವ ಆಶಿಶ್ ಪಟೇಲ್ ಮತ್ತು ಬಲ್ಲೇವ್ ಸಿಂಗ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.