ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ‘ಮಹಾಕುಂಭ ಮೇಳ’ವನ್ನು ‘ಅರ್ಥ ಹೀನ’ ಎಂದು ಹೇಳುವ ಮೂಲಕ RJD ವರಿಷ್ಠ ಲಾಲು ಪ್ರಸಾದ್ ಯಾದವ್ ವಿವಾದ ಹುಟ್ಟುಹಾಕಿದ್ದಾರೆ.
ದೆಹಲಿಯ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿದ ಘಟನೆಗೆ ರೈಲ್ವೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ದೂಷಿಸಿದ ಲಾಲು, ರೈಲ್ವೆ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಕಾಲ್ತುಳಿತ ಘಟನೆ ತುಂಬಾ ದು:ಖಕರ ಸಂಗತಿಯಾಗಿದೆ. ಇದು ಕೇಂದ್ರ ಸರ್ಕಾರದ ಅಸಮರ್ಪಕ ವ್ಯವಸ್ಥೆಗಳನ್ನು ಬಹಿರಂಗಪಡಿಸಿದೆ. ಇದರಲ್ಲಿ ರೈಲ್ವೆಯ ಸಂಪೂರ್ಣ ವಿಫಲತೆ ಎದ್ದು ಕಾಣುತ್ತಿದ್ದು, ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭ ಮೇಳಕ್ಕೆ ಲಕ್ಷಾಂತರ ಜನರು ಪ್ರಯಾಗ್ ರಾಜ್ ಗೆ ಹೋಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಾಲು ಪ್ರಸಾದ್ ಯಾದವ್, ಕುಂಭಕ್ಕೆ ಯಾವುದೇ ಅರ್ಥವಿಲ್ಲ. ಅದು ಅರ್ಥಹೀನವಾಗಿದೆ ಎಂದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರ ಬಿಜೆಪಿ ವಕ್ತಾರ ಮನೋಜ್ ಶರ್ಮಾ, ಇದು ಹಿಂದು ಧರ್ಮದ ಬಗ್ಗೆ ಆರ್‌ಜೆಡಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ತುಷ್ಟೀಕರಣದ ರಾಜಕಾರಣದಿಂದಾಗಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರ್‌ಜೆಡಿ ನಾಯಕರು ಯಾವಾಗಲೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ. ಮಹಾಕುಂಭವನ್ನು ಅರ್ಥಹೀನ ಎಂದು ಕರೆದ ಲಾಲು ಪ್ರಸಾದ್ ಅವರ ಹೇಳಿಕೆಯು ಹಿಂದೂ ಧರ್ಮದ ಬಗ್ಗೆ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಶರ್ಮಾ ಹೇಳಿದ್ದಾರೆ.