October 11, 2026
Sunday, October 11, 2026
spot_img

ಮಧುರೈ ಮೀನಾಕ್ಷಿ ಸುಂದರೇಶ್ವರ ದೇಗುಲದಲ್ಲಿ 17 ವರ್ಷಗಳ ನಂತರ ಮಹಾಕುಂಭಾಭಿಷೇಕ: ಕೋಟ್ಯಂತರ ಭಕ್ತರ ಆಗಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸುಂದರೇಶ್ವರ ದೇವಾಲಯದಲ್ಲಿ ಕುಂಭಾಭಿಷೇಕದ ಕಳೆಗಟ್ಟಿದೆ. 17 ವರ್ಷಗಳ ನಂತರ ನಡೆಯುತ್ತಿರುವ ಕುಂಭಾಭಿಷೇಕಕ್ಕೆ ಇಡೀ ಊರೇ ಮದುವಣಗಿತ್ತಿಯಂತೆ ತಯಾರಾಗಿದ್ದು, ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ.

ಇಂದು ಬೆಳಗಿನ ಜಾವ 3.35 ರಿಂದ 5.45 ರ ನಡುವೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವುದರೊಂದಿಗೆ ಕಾರ್ಯಕ್ರಮಗಳು ಆರಂಭವಾದವು. ಇವುಗಳಲ್ಲಿ ವಿಘ್ನೇಶ್ವರ ಪೂಜೆ, ದ್ರವ್ಯಾಹುತಿ, ಪೂರ್ಣಾಹುತಿ, ದೀಪಾರಾಧನೆ ಮತ್ತು ಯಾತ್ರಾದಾನಗಳು ಸೇರಿದ್ದವು. ಜೊತೆಗೆ ವಿಧಿವಿಧಾನಗಳ ನಿಮಿತ್ತ ಪವಿತ್ರ ಕಲಶಗಳನ್ನು ದೇವಾಲಯದ ಆವರಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ದಕ್ಷಿಣ ಭಾರತದ ಅತ್ಯಂತ ಪ್ರಮುಖ ಹಾಗೂ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವಪೂರ್ಣವಾದ ದೇವಾಲಯಗಳಲ್ಲಿ ಒಂದಾದ ಮೀನಾಕ್ಷಿ ಸುಂದರೇಶ್ವರ ದೇವಾಲಯವು, ಪಾರ್ವತಿ ದೇವಿಯ ಅವತಾರವಾದ ಮೀನಾಕ್ಷಿ ದೇವಿ ಮತ್ತು ಶಿವನ ರೂಪವಾದ ಸುಂದರೇಶ್ವರ ಸ್ವಾಮಿಗೆ ಸಮರ್ಪಿತವಾಗಿದೆ. ಮಹಾ ಕುಂಭಾಭಿಷೇಕಕ್ಕೆ ರಾಜ್ಯ ಮತ್ತು ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಇದು ದೇಗುಲದ ಅತ್ಯಂತ ಮಹತ್ವದ ಧಾರ್ಮಿಕ ಸಂದರ್ಭಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.

17 ವರ್ಷಗಳ ಸುದೀರ್ಘ ಅಂತರದ ನಂತರ ಜರುಗಿದ್ದರಿಂದ ಈ ಪ್ರತಿಷ್ಠಾಪನಾ ಸಮಾರಂಭವು ವಿಶೇಷ ಮಹತ್ವವನ್ನು ಪಡೆದುಕೊಂಡಿದ್ದು, ದೇವಾಲಯದ ಆವರಣದಲ್ಲಿ ಮತ್ತು ಸುತ್ತಮುತ್ತ ಭಕ್ತರ ದಂಡೇ ಸೇರಿದೆ. ಕೋಟ್ಯಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸುರಕ್ಷತಾ ದೃಷ್ಟಿಯಿಂದ ಸಕಲ ತಯಾರಿ ಮಾಡಲಾಗಿದೆ.

Must Read