ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಲಕ್ಷ್ಮಿ ಅವರ ದೇಹವನ್ನು 59 ತುಂಡುಗಳಾಗಿ ಕತ್ತರಿಸಿದ ಹಂತಕ, ಮನೆಯಲ್ಲಿ ರಕ್ತದ ಕಲೆಗಳಿಲ್ಲದಂತೆ ಮಾಡಲು ಕೆಮಿಕಲ್ ಬಳಸಿ ಸ್ವಚ್ಛಗೊಳಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯ ಭೀಕರ ಹತ್ಯೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹತ್ಯೆ ನಡೆದ ಸ್ಥಳದಲ್ಲಿ ಪ್ರತೀಯೊಂದು ಅಂಶವನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ತನಿಖೆ ವೇಳೆ ಹಂತಕ ಮಹಿಳೆಯ ದೇಹವನ್ನು 59 ತುಂಡುಗಳಾಗಿ ಕತ್ತರಿಸಿದ್ದರೂ, ಮನೆಯ ನೆಲ ಅಥವಾ ಗೋಡೆಗಳ ಮೇಲೆ ಯಾವುದೇ ರಕ್ತದ ಕಲೆಗಳು ಕಾಣಿಸಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿ ಮಹಿಳೆಯ ದೇಹವನ್ನು ತುಂಡು ಮಾಡಿ, ನಂತರ ಮನೆಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿದ್ದಾನೆ. ಮನೆಯ ಸ್ಥಿತಿಯನ್ನು ನೋಡಿದರೆ ಹೊರಗಿನಿಂದ ಹತ್ಯೆ ಮಾಡಿ ಮನೆಯಲ್ಲಿರಿಸಿರುವಂತೆ ಭಾಸವಾಗುವಂತಿದೆ. ಹಂತಕ ರಾಸಾಯನಿಕ ಬಳಸಿ ಮನೆಯನ್ನು ಸ್ವಚ್ಛಗೊಳಿಸಿದ್ದೇನೆ. ಅಲ್ಲದೆ, ಹೊರಗಿನಿಂದ ಸೂಟ್ ಕೇಸ್ ತಂದು ದೇಹದ ತುಂಡುಗಳನ್ನು ಅದರಲ್ಲಿಟ್ಟು ಸಾಗಿಸಲು ಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ಮನೆಯ ಫ್ರಿಡ್ಜ್ ನಲ್ಲಿಟ್ಟು, ಸ್ನಾನ ಮಾಡಿ ಪರಾರಿಯಾಗಿದ್ದಾನೆ. ಈ ಬೆಳವಣಿಗೆಯನ್ನು ನೋಡಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸರು ಸೋಮವಾರ ದೇಹದ ಭಾಗಗಳನ್ನು ತುಂಬಿದ ರೆಫ್ರಿಜರೇಟರ್ ಅನ್ನು ಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ಹಂತಕನಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ.