ದಿಗಂತ ವರದಿ ಅಂಕೋಲಾ:
ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಮೂರನೇ ಹಂತದ ಶೋಧ ಕಾರ್ಯಾಚರಣೆ ಸೋಮವಾರ ರಾತ್ರಿ ಸಹ ನಡೆಸಲಾಗಿದ್ದು ಕಾರ್ಯಾಚರಣೆ ಸಂದರ್ಭದಲ್ಲಿ ಕೇರಳದ ಭಾರತ್ ಬೆಂಜ್ ಲಾರಿಯ ಭಾಗವೊಂದು ಪತ್ತೆಯಾಗಿದೆ.
ಡ್ರೆಜ್ಜರ್ ಯಂತ್ರದ ಮೂಲಕ ಸಿ4(ನಾಲ್ಕನೇ ಪಾಯಿಂಟ್) ಸ್ಥಳದಲ್ಲಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಭಾರತ್ ಬೆಂಜ್ ಲಾರಿಯ ಕ್ರಾಶ್ ಗಾರ್ಡ್ ದೊರಕಿದೆ.
ಮೊದಲ ಹಂತದ ಕಾರ್ಯಾಚರಣೆ ಸಂದರ್ಭದಲ್ಲಿ ರಾಡಾರ್ ತಂತ್ರಜ್ಞಾನದ ಮೂಲಕ ನಾಲ್ಕು ಪಾಯಿಂಟ್ ಗಳನ್ನು ಗುರುತಿಸಿ ನಾಲ್ಕನೇ ಪಾಯಿಂಟ್ ಗುರುತಿಸಿರುವ ಸ್ಥಳದಲ್ಲಿ ಕೇರಳದ ಲಾರಿ ಇರುವ ಸಾಧ್ಯತೆ ಕುರಿತು ಅಂದಾಜಿಸಲಾಗಿತ್ತು ಇದೀಗ ಅದೇ ಸ್ಥಳದಲ್ಲಿ ಲಾರಿಯ ಬಿಡಿಭಾಗ ಪತ್ತೆಯಾಗಿದೆ.
ವಿಶ್ರಾಂತ ಸೇನಾಧಿಕಾರಿ ಇಂದ್ರಬಾಲನ್ ಕಾರ್ಯಾಚರಣೆ ಸಂದರ್ಭದಲ್ಲಿ ಹಾಜರಿದ್ದು ಗುರುತಿಸಿರುವ ನಾಲ್ಕನೇ ಪಾಯಿಂಟ್ ನಲ್ಲಿ ನೀರಿನ ಆಳದಲ್ಲಿ ಲಾರಿ ಇದ್ದು ಅದರ ಮೇಲೆ ಅಪಾರ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ, ಮಣ್ಣು ತೆರುವು ಮಾಡಿ ಲಾರಿ ಮೇಲೆಕ್ಕೆ ಎತ್ತಬೇಕಿದ್ದು ಈ ಸಾಮರ್ಥ್ಯ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಡ್ರೆಜ್ಜರ್ ಯಂತ್ರಕ್ಕೆ ಇದೆಯೇ ಎನ್ನುವುದನ್ನು ಸಹ ಪರಿಶೀಲಿಸಿ ಯೋಜನೆ ರೂಪಿಸಬೇಕಿದೆ ಎಂದು ಹೇಳಿದ್ದಾರೆ.
ಶಾಸಕ ಸತೀಶ ಸೈಲ್, ಪೊಲೀಸ್ ವರಿಷ್ಠ ಎಂ.ನಾರಾಯಣ ಕಾರ್ಯಾಚರಣೆ ಸ್ಥಳದಲ್ಲಿ ಉಪಸ್ಥಿತರಿದ್ದರು.